ದಾವಣಗೆರೆ, ಮಾ. 17 – ಮೂರು ತಿಂಗಳ ಕಾಲಮಿತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 25 ಸಾವಿರ ರೂ.ಗಳ ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಹೆಚ್. ಕೊಟ್ರೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬೇರೆ ಬೇರೆ ರಾಜ್ಯಗಳ ಮಾದರಿಯನ್ನಿಟ್ಟುಕೊಂಡು ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿ ತಜ್ಞರ ಸಮಿತಿ ರಚಿಸಿ 14,447 ಜನ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ ಎಂದವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರ ಜೊತೆ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಆಯನೂರು ಮಂಜುನಾಥ ಅವರ ನೇತೃತ್ವದಲ್ಲಿ ಪರಿಷತ್ತಿನ ಕೆಲ ಸದಸ್ಯರು ಭೇಟಿ ಮಾಡಿ ಚರ್ಚಿಸಿದ ನಂತರ ಮಾನವೀಯ ನೆಲೆಯಲ್ಲಿ ಅತಿಥಿ ಉಪನ್ಯಾಸಕರಿಗೆ ನೆರವಾಗುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಈ ಹಿಂದೆ ಜೆ.ಒ.ಸಿ. ಶಿಕ್ಷಕರನ್ನು ಒಂದು ಬಾರಿ ಇತ್ಯರ್ಥದ ರೀತಿಯಲ್ಲಿ ನೇಮಕ ಮಾಡಿಕೊಂಡ ರೀತಿಯಲ್ಲೇ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಪರಿಶೀಲಿಸುವುದಾಗಿ ಭರವಸೆ ನೀಡಲಾಗಿದೆ. ಈ ಕ್ರಮಗಳನ್ನು ಸಮಿತಿ ಸ್ವಾಗತಿಸುತ್ತದೆ ಎಂದು ಕೊಟ್ರೇಶ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಮಂಜಮ್ಮ, ರಾಜ್ಯದಲ್ಲಿ 7,600ರಷ್ಟು ಮಹಿಳಾ ಅತಿಥಿ ಉಪನ್ಯಾಸಕರಿದ್ದಾರೆ. ಇವರು ಹೆರಿಗೆ – ವೈದ್ಯಕೀಯ ರಜೆ ಪಡೆಯಲೂ ಸಾಧ್ಯವಾಗುತ್ತಿಲ್ಲ. ರಜೆ ಪಡೆದರೆ ಕೆಲಸದಿಂದಲೇ ಬಿಡುಗಡೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ಕೊಡಬೇಕು ಎಂದವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಹ ಕೋಶಾಧ್ಯಕ್ಷ ಡಾ. ಎಂ. ಪ್ರಭಾಕರ್, ಕಾರ್ಯದರ್ಶಿ ಎಸ್.ಕೆ. ಸೌಮ್ಯ, ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ, ಹೆಚ್.ಎಸ್. ಶ್ವೇತ ಉಪಸ್ಥಿತರಿದ್ದರು.