ಹರಪನಹಳ್ಳಿ, ಮಾ.17- ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲು ಚುನಾವಣೆ ಆಯೋಗ ಶಿಫಾರಸ್ಸು ಮಾಡಿರುವ ಪರಿಣಾಮ ಎಲ್ಲಾ ರೀತಿಯ ಮಾನದಂಡಗಳಿಂದ ಸೂಕ್ತವಾಗಿರುವ ಬಾಗಳಿ ಕ್ಷೇತ್ರವನ್ನು ನೂತನ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಎಂದು ಘೋಷಿಸಬೇಕು ಎಂದು ಬಾಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪೂಜಾರ್ ಹನುಮಂತಪ್ಪ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗಡಿಯನ್ನು ಬಾಗಳಿ ಕ್ಷೇತ್ರ ಹೊಂದಿಕೊಂಡಿದೆ. ಜನಸಂಖ್ಯೆ ಆಧಾರದಲ್ಲೂ ಮುಂಚೂಣಿ ಯಲ್ಲಿದೆ. ರಾಜ್ಯ ಹೆದ್ದಾರಿಗೆ ಹತ್ತಿರವಿದ್ದು, ಐತಿಹಾಸಿಕ ಕ್ಷೇತ್ರವೆನ್ನುವ ಹೆಗ್ಗಳಿಕೆಯೂ ಇದೆ. ಕಂದಾಯ ಗ್ರಾಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿದ್ದು, ಬಾಗಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಆಗಲು ಸೂಕ್ತವಾಗಿದೆ. ನೂತನ ಜಿ.ಪಂ. ಕ್ಷೇತ್ರ ಪಡೆಯಲು ಪಕ್ಷಾತೀತವಾಗಿ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.
ಬೀಚಿ ಬಳಗದ ಗೌರಾವಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ ದಾರರಿಗೆ ಹಾಗೂ ಸಾರ್ವಜನಿ ಕರಿಗೆ ಅನುಕೂಲವಾಗುವ ರೀತಿ ಯಲ್ಲಿರಬೇಕು. ಆದರೆ ಇಲ್ಲಿನ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಇಚ್ಛಾಶಕ್ತಿ ಗನುಗುಣ ವಾಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಹೆಸರುಗಳನ್ನು ಸೂಚಿಸಿರುವುದು ಮತ್ತು ಕ್ಷೇತ್ರಗಳ ಸ್ಥಳಗಳನ್ನು ಅದಲು ಬದಲು ಮಾಡು ತ್ತಿರುವುದು ಅವೈಜ್ಞಾನಿಕವಾಗಿದೆ ಎಂದರು.
ಈ ಹಿಂದೆ ಅಧಿಕಾರಿಗಳು ನಂದಿಬೇವೂರು ಗ್ರಾಮ ಪಂಚಾಯ್ತಿ ಕ್ಷೇತ್ರಕ್ಕೆ ಇರುವ ಅರ್ಹತೆಯನ್ನು ಕಡೆಗಣಿಸಿ, ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ಆದರೆ ಕ್ಷೇತ್ರದ ಜನತೆ ಚುನಾವಣೆಯನ್ನು ಬಹಿಷ್ಕರಿಸಿ ನ್ಯಾಯಾಲಯದ ಮೂಲಕ ಮತ್ತೆ ಸದಸ್ಯರನ್ನು ಹೆಚ್ಚು ಮಾಡಿಕೊಂಡೇ ಚುನಾವಣೆ ಮಾಡಿದ್ದೇವೆ. ಅಧಿಕಾರಿಗಳು ನೂತನ ಬಾಗಳಿ ಕ್ಷೇತ್ರವನ್ನು ಘೋಷಿಸದಿದ್ದರೆ ತಾವು ಎಲ್ಲಾ ರೀತಿಯ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಬಾಗಳಿ ಕೊಟ್ರೇಶಪ್ಪ ಮಾತ ನಾಡಿ, ನೂತನ ಜಿ.ಪಂ. ಕ್ಷೇತ್ರವನ್ನು ಬಾಗಳಿ ಕ್ಷೇತ್ರಕ್ಕೆ ಮೀಸಲು ಇಡಬೇಕೆಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ. ಕ್ಷೇತ್ರ ಪಡೆಯಲು ಇರುವ ಅರ್ಹತೆಯನ್ನು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸು ತ್ತೇವೆ. ಯಾವುದೇ ಆತಂಕ ಬೇಡ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಹೊಸೂರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಘ ಟನಾ ಕಾರ್ಯದರ್ಶಿ ಶೃಂಗಾರತೋಟ ಬಸವ ರಾಜ್, ಬೀಚಿ ಬಳಗದ ಅಧ್ಯಕ್ಷ ನಿಂಗರಾಜ ಮಾತನಾಡಿ, ತಾಲ್ಲೂಕಿನ ಕಂದಾಯ ಅಧಿಕಾರಿ ಗಳು ಯಾವ ಯೋಗ್ಯತೆ ಇಲ್ಲದ ಮಾಡ್ಲಿಗೇರಿಗೆ ನೂತನ ಜಿಲ್ಲಾ ಪಂಚಾಯ್ತಿ ಕ್ಷೇತ್ರವೆಂದು ಶಿಫಾರಸ್ಸು ಮಾಡಿದ್ದಾರೆಂದು ಮಾಹಿತಿ ಇದೆ. ಬಾಗಳಿಗೆ ನೂತನ ಜಿ.ಪಂ. ಕ್ಷೇತ್ರ ನೀಡದಿದ್ದರೆ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಎನ್. ಮಂಜುನಾಥ, ಗಿರೀಶ್, ಮುಖಂಡರಾದ ಹರ್ಷವರ್ಧನ್, ದೊಡ್ಡ ಬಸಪ್ಪ, ಮಲ್ಲಿಕಾರ್ಜುನ, ಬಿ. ಕರಿಬಸಪ್ಪ, ಶಂಕರ, ರೇವಣ್ಣ ಇನ್ನಿತರರಿದ್ದರು.