ನಂದಿಗುಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ
ಮಲೇಬೆನ್ನೂರು, ಮಾ.17- ನಂದಿಗುಡಿ ಮಠ ಯಾರ ಸ್ವತ್ತಲ್ಲ. ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾಗಿಲ್ಲ ಎಂದು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಗೋವಿನಹಾಳ್ ಗ್ರಾಮದ ಶ್ರೀ ಸಿದ್ಧರಾಮೇಶ್ವರ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾಜದ ಮುಖಂಡ ದಡ್ಡಿ ಕೆ.ಪಿ. ಚಂದ್ರಶೇಖರಪ್ಪ ಅವರ ಶ್ರದ್ಧಾಂಜಲಿ ಕಾರ್ಯ ಕ್ರಮ ಹಾಗೂ ಸರ್ವ ಶರಣರ ಸಮ್ಮೇಳನದ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಠ ಸಮಾಜದ ಆಸ್ತಿ. ನಿಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಮಠಕ್ಕೆ ಬನ್ನಿ. ನಾವು ಒಗ್ಗಟ್ಟಾಗಿದ್ದರೆ ಸರ್ಕಾರ ನಮ್ಮ ಕಡೆ ತಿರುಗಿ ನೋಡುತ್ತದೆ. ನಾನು ಯಾರೇ ಆಗಿದ್ದರೂ, ಎಲ್ಲಿಯವನಾಗಿದ್ದರೂ ನಿಮ್ಮ ಮಠದ ಸ್ವಾಮೀಜಿ ಆಗಿಯೇ ಬಂದಿದ್ದೇನೆ. ಈ ಮಠಕ್ಕೆ ಬಂದಂದಿನಿಂ ದಲೂ ಸಾಕಷ್ಟು ನೋವು ಅನುಭವಿಸಿದ್ದೇವೆ. ಕೋ ರ್ಟಿನಲ್ಲಿದ್ದ ಸಮಸ್ಯೆ ಬಗೆಹರಿದಿದೆ. ಸಮಾಜದ ಹಿರಿಯರು ಮುಂದಿನ ದಿನಗಳಲ್ಲಿ ಸಮಾಜದ ಒಗ್ಗಟ್ಟು ಹಾಗೂ ಮಠದ ಅಭಿವೃದ್ಧಿ ಕುರಿತು ಶ್ರಮಿ ಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗೋಣ ಎಂದು ಭಕ್ತರಿಗೆ ಹೇಳಿದರು.
ಗೋವಿನಹಾಳ್ ಗ್ರಾಮದ ದಡ್ಡಿ ಮನೆತನದವರು ಸಮಾಜ ಹಾಗೂ ಮಠಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದಡ್ಡಿ ಚಂದ್ರಶೇಖರಪ್ಪನವರು ನಮಗೆ ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಅಷ್ಟೇ ಅಲ್ಲ, ಸಮಾಜ ಹಾಗೂ ಮಠಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ವಾಮೀಜಿ ಸ್ಮರಿಸಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ನಾವು ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ್ದರೂ ನೊಳಂಬ ವೀರಶೈವ ಸಮಾಜದವರಾಗಿ ಬೆಳೆದಿದ್ದೇವೆ. ನಮ್ಮ ತಂದೆ ಹೆಚ್. ಶಿವಪ್ಪನವರನ್ನು ಬೆಳೆಸಿದ ಈ ಸಮಾಜ ನನ್ನನ್ನೂ ಬೆಳೆಸಿದೆ. ನೊಳಂಬ ಸಮಾಜಕ್ಕೆ ಸಿಗಬೇಕಾದ ಹಕ್ಕುಗಳನ್ನು ದೊರಕಿಸುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಸಮಾಜದ ಗೋವಿನಹಾಳ್ ನಿಂಗನಗೌಡ್ರು, ದೇವರಾಜಪ್ಪ, ದಡ್ಡಿ ಚಂದ್ರಶೇಖರಪ್ಪ, ಜಿಗಳಿ ರುದ್ರಗೌಡ್ರು, ಬಸವನಗೌಡ್ರು, ಮಲ್ಲಪ್ಪಗೌಡ್ರು, ಹಳ್ಳಿಹಾಳ್ ಮುರುಗೇಶಪ್ಪ, ಕೊಕ್ಕನೂರು ಭರಮ ಗೌಡ್ರು ಸೇರಿದಂತೆ ಇನ್ನೂ ಅನೇಕರು ನಮ್ಮನ್ನಗ ಲಿದ್ದರೂ ಸಮಾಜದ ಆಸ್ತಿಗಳಾಗಿ ಉಳಿದುಕೊಂಡಿ ದ್ದಾರೆ. ಇವರುಗಳು ತಮ್ಮ ಸಮಾಜಕ್ಕೆ ಅಷ್ಟೇ ಅಲ್ಲ. ಎಲ್ಲಾ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದು ಶಿವಶಂಕರ್ ಸ್ಮರಿಸಿದರು.
ಹಿರಿಯ ಮುಖಂಡ ವಾಸನದ ಜಿ. ನಂದಿ ಗೌಡ್ರು ಮಾತನಾಡಿ, ನಮ್ಮಂತಹ ಸಣ್ಣ ಸಮಾಜ ದವರನ್ನು ಯಾವ ಸರ್ಕಾರವೂ ಗುರುತಿಸುವುದಿಲ್ಲ. ನಮ್ಮ ಮಠಕ್ಕೆ ಅನುದಾನವನ್ನೂ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೊನ್ನಾಳಿ ಮಾಜಿ ಶಾಸಕ ಹಾಗೂ ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ನೂತನ ನಿರ್ದೇಶಕ ಡಾ. ಡಿ.ಬಿ. ಗಂಗಪ್ಪ ಮಾತನಾಡಿ, ಸದಾ ನಗುಮುಖ ಸ್ವಭಾವದ ದಡ್ಡಿ ಚಂದ್ರಪ್ಪನವರು ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದರು. ಸ್ನೇಹಕ್ಕೆ ಮತ್ತೊಂದು ಹೆಸರು ಚಂದ್ರಣ್ಣ ಆಗಿದ್ದರು. ನಾನು ಹೊನ್ನಾಳಿ ವಿಧಾನಸಭೆ ಚುನಾವಣೆಗೆೆ ಸ್ಪರ್ಧಿಸಿದ್ದಾಗ ಆರ್ಥಿಕ ಸಹಾಯ ಮಾಡಿ ನನ್ನ ಗೆಲುವಿಗೆ ಸಹಕಾರಿಯಾಗಿದ್ದರು. ಆರ್ಥಿಕ ಶ್ರೀಮಂತಿಕೆಯ ಜೊತೆಗೆ ಹೃದಯ ಶ್ರೀಮಂತಿಕೆ ಯನ್ನೂ ಅವರು ಹೊಂದಿದ್ದರು. ಹಾಗಾಗಿಯೇ ಅವರು ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಗ್ರಾಮದ ಹಿರಿಯರಾದ ಮಲ್ಲನಗೌಡ್ರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಹೊಳೆಸಿರಿಗೆರೆಯ ಎಂ.ಜಿ. ಪರಮೇಶ್ವರಗೌಡ, ವಾಸನದ ಜಿ. ದೇವರಾಜಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಎ. ಗೋವಿಂದ ರೆಡ್ಡಿ, ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ನೂತನ ನಿರ್ದೇಶಕ ಸಿ.ಬಿ. ಈಶ್ವರಪ್ಪ, ಜಿ.ಪಂ. ಮಾಜಿ ಸದಸ್ಯ ನೇಮಿಚಂದ್ರಪ್ಪ ಮಾತನಾಡಿ, ಚಂದ್ರಪ್ಪನವರ ಒಡನಾಟ ಹಾಗೂ ಸಾಮಾಜಿಕ ಸೇವೆಯನ್ನು ಸ್ಮರಿಸಿದರು.
ಶ್ರೀಮತಿ ಜಯಶೀಲಮ್ಮ ದಡ್ಡಿ ಚಂದ್ರಶೇಖರಪ್ಪ, ಕಿರುವಾಡಿ ಸೋಮಶೇಖರಪ್ಪ, ಬಂಡೇರ ತಿಮ್ಮಣ್ಣ, ವಾಸನದ ಬಸವರಾಜಪ್ಪ, ಎಸ್.ಕೆ. ಮಹಾಂತೇಶ್, ಎ. ಶೇಖರಪ್ಪ, ಎಂ.ವಿ. ನಾಗರಾಜ್, ಮಲೇಬೆನ್ನೂರಿನ ಎಂ. ಕರಿಬಸಯ್ಯ, ಬಿ. ವೀರಯ್ಯ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಹಳ್ಳಿಹಾಳ್ ಹೆಚ್. ವೀರನಗೌಡ, ಹೆಚ್.ಎಸ್. ಮಲ್ಲನಗೌಡ, ಹೆಚ್.ಜಿ. ಶಾಂತಣ್ಣ, ಹೆಚ್.ಟಿ. ಪರಮೇಶ್ವರಪ್ಪ, ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೆ. ಮಹಾದೇವಪ್ಪ, ಪಿ. ಮಹಾಲಿಂಗಪ್ಪ, ವಕೀಲ ತಿಮ್ಮನಗೌಡ, ಹಿಂಡಸಘಟ್ಟ ಮುರುಗೇಶ್, ಕೆ.ಪಿ. ಆಂಜನೇಯ, ಪಾಟೀಲ್ ಇನ್ನಿತರರು ಭಾಗವಹಿಸಿದ್ದರು.
ಕೆ. ಭರಮಗೌಡ ಸ್ವಾಗತಿಸಿದರು. ಬಿ.ಜಿ. ಪಾಟೀಲ್ ಅವರು ದಡ್ಡಿ ಚಂದ್ರಶೇಖರಪ್ಪನವರ ಕಿರು ಪರಿಚಯ ಮಾಡಿದರು. ನಿವೃತ್ತ ಪ್ರಾಚಾರ್ಯ ಆರ್.ಸಿ. ದೊಡ್ಡಗೌಡ್ರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಡ್ಡಿ ಹನುಮಗೌಡ ನಿರೂಪಿಸಿದರು. ಕೆ.ಪಿ. ಕುಬೇರಗೌಡ ವಂದಿಸಿದರು. ಹೊನ್ನಾಳಿಯ ಸಂತೃಪ್ತಿ ಅಂಧರ ಸೇವಾ ಸಂಸ್ಥೆಯ ಕಲಾವಿದರು ಹಾಡಿದ ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.