ಜಿಲ್ಲಾ ಬಾಲ ಭವನದ ಅಭಿವೃದ್ಧಿಗೆ ಕ್ರಮ: ಚಿಕ್ಕಮ್ಮ

ಜಿಲ್ಲಾ ಬಾಲ ಭವನದ ಅಭಿವೃದ್ಧಿಗೆ ಕ್ರಮ: ಚಿಕ್ಕಮ್ಮ - Janathavaniದಾವಣಗೆರೆ, ಮಾ.17 – ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಬಾಲ ಭವನ ಗಳನ್ನು ನಿರ್ಮಿಸಲು ಜಮೀನಿನ ಅವಶ್ಯಕತೆ ಯಿದ್ದು, ಜಿಲ್ಲಾಡಳಿತದಿಂದ ಜಮೀನು ನೀಡಿದಲ್ಲಿ,  ತಾಲ್ಲೂಕುಗಳಲ್ಲೂ ಬಾಲಭವ ನದ ಚಟುವಟಿಕೆಗಳನ್ನು ವಿಸ್ತರಣೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಹೇಳಿದರು. ನಗರದ ಮಹಿಳಾ ನಿಲಯದ ಸಭಾಂಗಣದಲ್ಲಿ  ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗೆ ಬೇಕಾದ ಆಟಿಕೆಗಳನ್ನು ಅಳವಡಿಸಲಾಗುವುದು. ಬಾಲಭವನ ಸಭಾಂಗಣ ಉನ್ನತೀಕರಣ, ಗ್ರಂಥಾಲಯ ನಿರ್ಮಾಣ, ಬಯಲು ರಂಗಮಂದಿರ, ಗ್ರೀನ್ ರೂಂ, ಸ್ಕ್ರೀನ್ ಫೆಸಿಲಿಟಿ ಸೇರಿದಂತೆ ಬಾಲಭವನದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡೆ, ಚಿತ್ರಕಲೆ, ನಾಟಕ, ಆಟೋಟಗಳ ಸೌಲಭ್ಯಗಳನ್ನು ಒದಗಿಸಲಾಗುವುದು. ಹಾಗೂ ಬಾಲಭವನದ ಉನ್ನತೀಕರಣಕ್ಕಾಗಿ ದಾನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಲಾಗುವುದು ಎಂದರು.

ಜೆ.ಹೆಚ್. ಪಟೇಲ್ ಬಡವಾಣೆಯಲ್ಲಿರುವ ಎರಡು ಉದ್ಯಾನವನಗಳನ್ನು ಬಾಲ ಭವನದ ಹೆಸರಿಗೆ ಮಂಜೂರಾಗಿರುತ್ತವ. ಈಗಾಗಲೇ ರಾಜ್ಯ ಬಾಲ ಭವನದಿಂದ ವಿವಿಧ ಅಭಿವೃದ್ಧಿಗಾಗಿ ರೂ. 43.81 ಲಕ್ಷ, ಮಕ್ಕಳ ಪುಟಾಣಿ ರೈಲು ಅಳವಡಿಸಲು ರೂ. 102.36 ಲಕ್ಷ ಹಾಗೂ ಮಕ್ಕಳ ಆಟಿಕೆಗಳ ಅಳವಡಿಕೆಗಳಿಗಾಗಿ ಒಟ್ಟು ರೂ. 15 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುಮಾರು 4 ಎಕರೆ ವಿಸ್ತೀರ್ಣದ ಆವರಣದಲ್ಲಿ ಬಾಲಭವನ ಕಟ್ಟಡ ನಿರ್ಮಿಸಲಾಗಿದೆ.  ಪುಟಾಣಿ ರೈಲು ಅನುಷ್ಠಾನಗೊಳಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳು ರೈಲು ಓಡಿಸಲು ಸಾಧ್ಯವಾಗಿಲ್ಲ.  ಅಲ್ಲದೇ ನೀರಿನ ಕೊರತೆ ಹೆಚ್ಚಾಗಿದ್ದು, ಸದ್ಯ 30 ಸಾವಿರ ಲೀ. ಸಾಮರ್ಥ್ಯದ ತೊಟ್ಟಿ ನಿರ್ಮಿಸಲಾಗುತ್ತಿದೆ. ಪಾರ್ಕ್ ನಿರ್ವಹಣೆಗೆ ಕೆಲಸ ಗಾರರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭವನದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು, ಸೌಲಭ್ಯಗಳನ್ನು ಪಡೆಯುವ ಮಕ್ಕಳ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ, ಪಾರ್ಕ್ ಅಭಿವೃದ್ಧಿ ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ರೀತಿಯ ಆಟಿಕೆಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ,  ಈಗಾಗಲೇ ಬಾಲಭವನದ ಆವರಣದಲ್ಲಿ ಎರಡು ಬೋರ್‍ವೆಲ್ ಗಳನ್ನು ಕೊರೆಸಿದ್ದು ನೀರು ಬಿದ್ದಿಲ್ಲ. ನೀರಿನ ಕೊರತೆ ಹೆಚ್ಚು ಇರುವುದರಿಂದ ತಳಮಟ್ಟದಲ್ಲಿ 30 ಸಾವಿರ ಲೀಟರ್‍ನ ನೀರಿನ ಟ್ಯಾಂಕ್ ನಿರ್ಮಿಸಿ, ಬಹುಗ್ರಾಮ ನೀರಿನ ಯೋಜನೆಯಡಿ ಸಂಪರ್ಕ ಪಡೆಯಲು ಚಿಂತಿಸಲಾಗಿದೆ ಎಂದರು.

ಬಾಲಮಂದಿರದ ಉದ್ಯಾನವನವು ಹೊರವಲಯದಲ್ಲಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿಲ್ಲ. ಆದ ಕಾರಣ ಮುಂದಿನ ದಿನಗಳಲ್ಲಿ ಉದ್ಯಾನವನದಲ್ಲಿರುವ ಟ್ರೈನ್, ಆಟಿಕೆ ವಸ್ತುಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಮುಂದಾಗುತ್ತೇವೆ. ಅಲ್ಲದೇ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಹೇಳಿ ಶಾಲಾ ಮಕ್ಕಳಿಗೆ ಶನಿವಾರ ಭೇಟಿ ಮಾಡಿಸುವಂತೆ ಸೂಚಿಸುತ್ತೇವೆ. 

ಮಕ್ಕಳ ಪ್ರತಿಭೆ ಪ್ರದರ್ಶಿಸಲು ಬಾಲ ವೇದಿಕೆಯಡಿ ವಾರಾಂತ್ಯ ಕಾರ್ಯಕ್ರಮ ನಡೆಸಲಾಗುವುದು. ಕರಕುಶಲ ಕಲೆ ಕಲಿಸಲಾಗುವುದು. ವರ್ಷಕ್ಕೊಂದು ಬಾರಿ ಸ್ಪರ್ಧೆ ಏರ್ಪಡಿಸಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು. 

ಉದ್ಯಾನವನಕ್ಕೆ ಉಚಿತ ಪ್ರವೇಶ ನೀಡುತ್ತೇವೆ ಹಾಗೂ ಇಲ್ಲಿರುವ ಆಟಿಕೆಗಳನ್ನು ಸಹ ಉಚಿತವಾಗಿ ಬಳಸಬಹುದು. ಆದರೆ ಟ್ರೈನ್ ರನ್ ಆಗಬೇಕಾದರೆ ಮಕ್ಕಳು ರೂ.10 ಹಾಗೂ ದೊಡ್ಡವರು ರೂ.25 ಶುಲ್ಕ ಪಾವತಿಸಬೇಕು. ಈ ಹಣವನ್ನು ಉದ್ಯಾನವನದ ಶ್ರೇಯೋಭಿವೃದ್ಧಿಗೆ ಬಳಸಲಾಗುತ್ತದೆ ಎಂದರು. 

error: Content is protected !!