ಅನಾಥ ಪ್ರಾಣಿಗಳಿಗೆ ಅನ್ನದಾತ ನಮ್ಮ ದಾವಣಗೆರೆ ತಂಡ

ದಾವಣಗೆರೆ, ಮೇ 26- ಒಂದೆಡೆ ಲಾಕ್‌ಡೌನ್‌ ಪರಿಣಾಮ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಮತ್ತೊಂದೆಡೆ ಬಿಸಿಲ ಬೇಗೆ. ಪರಿಣಾಮ ಬೀದಿ ದನಗಳು,ಬೆಕ್ಕು,  ನಾಯಿಗಳು, ಕೋತಿಗಳು, ಪಕ್ಷಿಗಳು ನೀರು ಆಹಾರ ಸಿಗದೆ ತತ್ತರಿಸುತ್ತಿವೆ.

ಎಷ್ಟು ದಿನ ಲಾಕ್‌ಡೌನ್ ಎಂದು ಚಿಂತಿಸುವ ಜನತೆ, ತನಗೆ ತಿಂಗಳವರೆಗೆ ಬೇಕಾದಷ್ಟು ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿಟ್ಟುಕೊಳ್ಳುತ್ತಿದ್ದಾರೆ ಹಾಗೂ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ನಿರ್ಗತಿಕರಿಗೆ, ಬಡವರಿಗೆ ಆಹಾರದ ಕಿಟ್ ಕೊಟ್ಟರೆ, ಮತ್ತೆ ಕೆಲವರು ಕೊರೊನಾ ಸೋಂಕಿತರಿಗೆ ಆಹಾರ ನೀಡಿ ಮಾನವೀಯತೆ  ಮೆರೆಯುತ್ತಿದ್ದಾರೆ.

ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿ ಹೇಗಿದೆ? ಅವುಗಳು ಆಹಾರಕ್ಕಾಗಿ ಏನು ಮಾಡುತ್ತಿವೆ ಎಂಬ ಕಿಂಚಿತ್ತು ಯೋಚನೆಯೂ ಬಹುತೇಕರಿಗಿಲ್ಲ. ಪ್ರಾಣಿ, ಪಕ್ಷಿಗಳ ಬಗ್ಗೆ ಗಮನ ಹರಿಸುವವರ ಸಂಖ್ಯೆ ಮಾತ್ರ ಬಹು ವಿರಳ. ಇಂತಹ ಅತಿ ವಿರಳ ಪ್ರಾಣಿ-ಪಕ್ಷಿ ಪ್ರಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವುದು `ನಮ್ಮ ದಾವಣಗೆರೆ’ ಟೀಂ.

ಹೌದು, ಯಾವುದೇ ರೀತಿಯ ಪ್ರಚಾರ ಬಯಸದೆ 17 ಜನರ ತಂಡವೊಂದು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಹಾಯ ಮಾಡುವ ಜೊತೆ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ಆಹಾರ, ನೀರು ಒದಗಿಸುವ ಕೆಲಸ ಮಾಡುತ್ತಿದೆ.

ಫೇಸ್ ಬುಕ್‌ನಲ್ಲಿ `ನಮ್ಮ ದಾವಣಗೆರೆ’ ಎಂಬ ಗ್ರೂಪ್ ಇದೆ. ಈ ಗ್ರೂಪ್‌ನ ಸದಸ್ಯರು ಬೇರೆ ಯಾರೊಬ್ಬರಿಂದಲೂ ಒಂದು ರೂ. ಸಹ ಹಣ ಪಡೆಯದೆ, ತಾವೇ ಹಣ ಕೂಡಿಸಿ ಇಡೀ ಮನುಕುಲಕ್ಕೆ ಮಾದರಿಯಾಗುವಂತಹ ಕಾರ್ಯ ಮಾಡುತ್ತಿದ್ದಾರೆ.

ಅಂದ ಹಾಗೆ ಈ ತಂಡಕ್ಕೆ ಜಿಲ್ಲಾಧಿಕಾರಿಗಳ ಮೆಚ್ಚುಗೆಯೂ ಇದೆ. ಸ್ವತಃ ಜಿಲ್ಲಾಡಳಿತದಿಂದ 17 ಸದಸ್ಯರಿಗೆ ಪಾಸ್ ನೀಡಲಾಗಿದೆ. ಈ ಸದಸ್ಯರು ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತರಿಗೂ ಸಹಾಯ ಮಾಡಬಹುದು. ಅಷ್ಟರ ಮಟ್ಟಿಗೆ ಜಿಲ್ಲಾಡಳಿತದ ಸಹಾಯ ದೊರೆತಿದೆ.

ಬೀದಿ ಹಸುಗಳು ಬಂದರೆ ಮನೆಯಲ್ಲಿ ಅಳಿದುಳಿದ ಆಹಾರ ನೀಡುವವರೇ ಹೆಚ್ಚು. ಆದರೆ ಈ ತಂಡ ನಿತ್ಯ ತಾಜಾ ಚಪಾತಿ, ಹಣ್ಣು-ತರಕಾರಿಗಳನ್ನು ಹಸುಗಳಿಗೆ ನೀಡುತ್ತದೆ. 

ನಾಯಿಗಳಿಗೆ ಬಿಸ್ಕಿಟ್ ಕೊಟ್ಟರೆ ಡಯಾಬಿಟಿಸ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಚಪಾತಿ ಹಾಗೂ ಮೊಸರು ನೀಡಲಾಗುತ್ತಿದೆ. ಇನ್ನು ನಾಯಿ ಮರಿಗಳಿಗೆ ಹಾಲು ಕೊಡಲಾಗುತ್ತದೆ. ಅದರೊಟ್ಟಿಗೆ ಜೈನ ಸಮುದಾಯದ ಮನೆಗಳಲ್ಲಿ ಮಾಡಲ್ಪಡುವ ಕಾಕಡವನ್ನೂ ಹಾಲಿನ ಜೊತೆ ನೀಡಲಾಗುತ್ತಿದೆ. ವೆಟರ್ನರಿ ವೈದ್ಯರ ಸಲಹೆ ಪಡೆದೇ ಪ್ರಾಣಿಗಳಿಗೆ ಉತ್ತಮ ಆಹಾರ ನೀಡುತ್ತಿದೆ ಈ ತಂಡ.

ಬೇರೆಯವರಿಂದ ಹಣ ಪಡೆದು ಅವರಿಂದ ಆಪಾದನೆ ಗೊಳಗಾಗುವ ಬದಲು ನಾವೇ ಹಣ ಕೂಡಿಟ್ಟುಕೊಂಡು ಸೇವೆ ಮಾಡುವುದು ಉತ್ತಮ. ನಮ್ಮ ತಂಡವು ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದನ್ನು ನೋಡಿ ಪ್ರೇರಿತರಾದ ಅನೇಕರು ತಮ್ಮ ಮನೆ ಹಾಗೂ ಬೀದಿಗಳಲ್ಲಿ ಆಹಾರ ನೀಡುತ್ತಿದ್ದಾರೆ ಎನ್ನುತ್ತಾರೆ ತಂಡದ ಸದಸ್ಯ ರೋಹಿತ್ ಎಸ್.ಜೈನ್.

ಕೇವಲ ದಾವಣಗೆರೆ ಅಷ್ಟೇ ಅಲ್ಲ, ರಾಯಚೂರು, ಯಾದಗಿರಿ, ಬಿಜಾಪುರ, ಬೆಂಗಳೂರು, ಮೈಸೂರು ಹೀಗೆ ಹೊರ ಜಿಲ್ಲೆಯ ಕೆಲವರು ಅಲ್ಲಿನ ಪ್ರಾಣಿಗಳಿಗೆ ಆಹಾರ ಅಗತ್ಯವಿದೆ ಎಂದು ಫೋಟೋ ಕಳುಹಿಸಿದಾಗ ನಮ್ಮ ತಂಡದಿಂದಲೇ ಆನ್ ಲೈನ್ ಮೂಲಕ ಹಣ ನೀಡಿದ್ದೇವೆ ಎಂದರು ರೋಹಿತ್.

ಅಂದ ಹಾಗೆ ಸಾಮಾಜಿಕ ಜಾಲತಾಣವನ್ನು ಕೇವಲ ಮನರಂಜನೆಗಷ್ಟೇ ಬಳಸಿಕೊಳ್ಳುವ ಬದಲು ಸಂಕಷ್ಟದ ಸಮಯದಲ್ಲಿ ಜನತೆಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ಸಹಾಯ ಮಾಡಬಹುದು ಎಂಬುದನ್ನು ಈ ತಂಡ ತೋರಿಸಿಕೊಡುವ ಮೂಲಕ ಮಾದರಿಯಾಗಿದೆ. 

ತಂಡದಲ್ಲಿ ರೋಹಿತ್ ಎಸ್.ಜೈನ್ ಅವರೊಂದಿಗೆ ವೃಷಭ್‌, ನಿಖಿಲ್, ಶಿವಯೋಗಿ, ಸುನಿಲ್ ಬಾಗೇವಾಡಿ, ದೀಪಕ್ ಎನ್., ಬಾಬು ಸುಬ್ರಹ್ಮಣ್ಯ, ನಿಹಾಲ್ ಸೋನಿ, ಎಂ.ಬಿ. ದೇವಿಕಾ, ಆಶಿಶ್ ಜೈನ್, ವಿವೇಕ್ ಜೈನ್, ಆನಂದ್ ಜೈನ್, ಸುಮತಿ ತಳವಾರ್, ಸಮೀರ್ ಟಕ್ಕರ್, ಪ್ರಕಾಶ್ ಸೇವೆಯಲ್ಲಿ ನಿರತರಾಗಿದ್ದಾರೆ.


ಅನಾಥ ಪ್ರಾಣಿಗಳಿಗೆ ಅನ್ನದಾತ ನಮ್ಮ ದಾವಣಗೆರೆ ತಂಡ - Janathavani– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!