ಹಳ್ಳಿಗಳಲ್ಲಿ ಸೋಂಕು ಹರಡದಂತೆ ನಿಗಾ ವಹಿಸಬೇಕು

ಕೊರೊನಾ ಜಾಗೃತಿ ಸಭೆಯಲ್ಲಿ ಪಿಡಿಓಗಳಿಗೆ ಶಾಸಕ ಎಸ್.ರಾಮಪ್ಪ ಸೂಚನೆ

ಮಲೇಬೆನ್ನೂರು, ಮೇ 23- ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡದಂತೆ ಹೆಚ್ಚಿನ ನಿಗಾವಹಿಸಿ ಎಂದು ಶಾಸಕ ಎಸ್‌. ರಾಮಪ್ಪ ಗ್ರಾ.ಪಂ. ಟಾಸ್ಕ್‌ಫೋರ್ಸ್‌ ಸಮಿತಿಗೆ ಸೂಚಿಸಿದರು.

ಹೊಳೆಸಿರಿಗೆರೆ, ಕೆ.ಎನ್‌. ಹಳ್ಳಿ, ವಾಸನ, ಕೊಕ್ಕನೂರು ಮತ್ತು ಭಾನುವಳ್ಳಿ ಗ್ರಾ.ಪಂ.ಗಳಿಗೆ ಭೇಟಿ ನೀಡಿ, ಕೊರೊನಾ ಜಾಗೃತಿ ಸಭೆಗಳನ್ನು ನಿನ್ನೆ ನಡೆಸಿದ ಶಾಸಕರು, ಸೋಂಕಿನ ಕೊಂಡಿಯನ್ನು ಕತ್ತರಿಸುವ ಕೆಲಸವನ್ನು ಮಾಡದ ಹೊರತು ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದರು.

ಸಾವಿನ ಪ್ರಮಾಣವನ್ನು ಕಡಿಮೆ ಮಾಡಬೇಕಾದರೆ ಸರ್ಕಾರ ತುರ್ತು ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಒತ್ತಾಯಿಸಿದ ಶಾಸಕರು, ಹರಿಹರ ಆಸ್ಪತ್ರೆಗೆ ಆಕ್ಸಿಜನ್‌ ಬೆಡ್‌ ಹೆಚ್ಚಳದ ಜೊತೆಗೆ ವೆಂಟಿಲೇಟರ್‌ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದರು.

ಮಲೇಬೆನ್ನೂರು ಪಟ್ಟಣ ಹೋಬಳಿ ಕೇಂದ್ರವಾಗಿರುವುದರಿಂದ ಅಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಆಕ್ಸಿಜನ್‌ ಬೆಡ್‌ ಸೌಲಭ್ಯ ಹಾಗೂ ಅಗತ್ಯವಿರುವ ವೈದ್ಯರು, ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕೆಂದು ಶಾಸಕ ರಾಮಪ್ಪ ಅವರು ಸಿರಿಗೆರೆಯಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಮೇಶ್‌ಕುಮಾರ್‌ ಮಾತನಾಡಿ, ಸಿರಿಗೆರೆಯಲ್ಲಿ ಇದುವರೆಗೆ 33 ಜನರಿಗೆ ಸೋಂಕು ತಗುಲಿದ್ದು, 20 ಜನ ಗುಣಮುಖರಾಗಿದ್ದಾರೆ. 8 ಜನ ಹೋಂ ಕ್ವಾರಂಟೈನ್‌ನಲ್ಲಿದ್ದು, ಒಬ್ಬರು ಮಾತ್ರ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದರು.

ತಾ.ಪಂ. ಇಓ ಗಂಗಾಧರಪ್ಪ, ಪ್ರೊಬೇಷನರಿ ಪಿಎಸ್‌ಐ ಶರಣಬಸಪ್ಪ, ಗ್ರಾ.ಪಂ. ಸದಸ್ಯ ನೂರ್‌ ಅಹಮದ್‌, ಮಾಜಿ ಸದಸ್ಯರಾದ ಕೆ.ಬಿ. ಸದಾಶಿವಪ್ಪ, ಹಾಲೇಶ್‌ ಕರೇಕಲ್‌, ಮುಖಂಡರಾದ ಬೂದಾಳ್‌ ತಿಮ್ಮಣ್ಣ, ನಿವೃತ್ತ ಸೈನಿಕ ಪರಶುರಾಮ್‌, ಶಿವಕುಮಾರ್‌, ಕೆ. ರವಿ ಮತ್ತಿತರರು ಸಭೆಯಲ್ಲಿದ್ದರು.

ಕೆ.ಎನ್‌. ಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಭರಮಗೌಡ ಪಾಟೀಲ್‌, ಉಪಾಧ್ಯಕ್ಷೆ ಗಿರಿಜಮ್ಮ ಗಿರಿಯಪ್ಪ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿ. ಕುಬೇರಪ್ಪ, ಪಿಡಿಓ ಪರಮೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!