ಜಗಳೂರು, ಆ.2- ನರೇಗ ಯೋಜನೆ ಅಡಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಎರೆಹುಳು ತೊಟ್ಟಿ ಕಟ್ಟಿಸಿಕೊಳ್ಳಲು `ರೈತ ಬಂಧು’ ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಸಂಬಂಧಪಟ್ಟ ಇಲಾಖೆಗಳಲ್ಲಿ ಆಸಕ್ತ ರೈತರು ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಆತ್ಮ ಯೋಜನೆಯಡಿಯಲ್ಲಿ ಕೃಷಿ ಇಲಾಖೆ ಮತ್ತು (ಐ.ಸಿ.ಎ.ಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಇಪ್ಕೋ ಸಂಯುಕ್ತ ಆಶ್ರಯದಲ್ಲಿ ಬೆಳೆ ವೀಕ್ಷಣೆಯ ಕಾರ್ಯಕ್ರಮವನ್ನು ತಜ್ಞರ ತಂಡದೊಂದಿಗೆ ಮರೇನಹಳ್ಳಿ, ಹಳುವದಂಡಿ, ದೇವಿಕೆರೆ ಗ್ರಾಮಗಳಲ್ಲಿ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಿದರು.
ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಬೆಳೆ ಚೆನ್ನಾಗಿ ಬೆಳೆದಿದೆ ಎಂದು ನಿರ್ಲಕ್ಷಿಸಬಾರದು ಮತ್ತು ಬೆಳೆ ವಿಮೆಯನ್ನು ಕಡ್ಡಾಯವಾಗಿ ಜುಲೈ 31 ರೊಳಗಾಗಿ ತಮ್ಮ ಸಂಬಂಧಪಟ್ಟ ಬ್ಯಾಂಕ್ ಮತ್ತು ಸೇವಾ ಕೇಂದ್ರಗಳಲ್ಲಿ ನಿಮ್ಮ ಬೆಳೆ ವಿಮೆಯನ್ನು ಕಟ್ಟಿಕೊಳ್ಳಬೇಕು.
ರೈತರು ಬೆಳೆ ಸಮೀಕ್ಷೆ ಆಪ್‌ನಲ್ಲಿ ತಾವೇ ಬೆಳೆದ ಬೆಳೆಗಳನ್ನು ನಮೂದು ಮಾಡುವ ಅಧಿಕಾರವನ್ನು ಸರ್ಕಾರ ನೇರವಾಗಿ ರೈತರಿಗೆ ಕೊಟ್ಟಿದೆ. ಈಗ ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮೊಬೈಲ್ ಆಪ್ ಮೂಲಕ ತಮ್ಮ ಅಧಿಕಾರ ಚಲಾಯಿಸಿ ನಮೂದು ಮಾಡಿಕೊಳ್ಳಬಹುದು. ಇದರಿಂದ ಅಕ್ಕಡಿ ಬೆಳೆ, ಮಿಶ್ರಬೆಳೆ, ಸಿರಿಧಾನ್ಯ ಮುಂತಾದ ಬೆಳೆಗಳನ್ನು ಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ. ಇದರಿಂದ ಮುಂದೆ ಖರೀದಿ ಕೇಂದ್ರ ಮತ್ತು ಬೇರೆ ಸೌಲಭ್ಯಗಳನ್ನು ರೈತರಿಗೆ ಪರಿಹಾರ ಕೊಡುವುದಕ್ಕೆ ಅನುಕೂಲವಾಗುತ್ತದೆ ಎಂದರು.
ತಾಲ್ಲೂಕಿನಲ್ಲಿ ಅಕ್ಕಡಿ ಬೆಳೆಯಾದ ತೊಗರಿ ಬೆಳೆ ಚೆನ್ನಾಗಿ ಬೆಳೆದಿದೆ. ಇನ್ನು 15 ದಿನಗಳು ಬಿಟ್ಟು ಕುಡಿ ಚಿವುಟುವ ಕೆಲಸಕ್ಕೆ ಚಾಲನೆ ಕೊಡುತ್ತೇವೆ. ಈ ಕುಡಿ ಚಿವುಟುವುದರಿಂದ ರೆಂಬೆ, ಕೊಂಬೆಗಳು ಜಾಸ್ತಿಯಾಗಿ ಇಳುವರಿ ಮಟ್ಟ ಜಾಸ್ತಿಯಾಗುತ್ತದೆ ಎಂದರು.
ಡಾ. ಮಲ್ಲಿಕಾರ್ಜುನ ಮತ್ತು ಡಾ. ಸಣ್ಣಗೌಡರು ನ್ಯಾನೋ ಯೂರಿಯಾ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸಲು ಮಾತನಾಡಿ, ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿ ಹುಳುಗಳು ಮಳೆ ಬಂದಿದ್ದರಿಂದ ಸ್ವಲ್ಪ ಹತೋಟಿಗೆ ಬಂದಿದೆ. ಮಳೆ ಬರವು ಕಾಯ್ದು ಕೊಂಡಾಗ ಮತ್ತೆ ಮರು ಕಳಿಸುವ ಸಾಧ್ಯತೆ ಇದೆ. ಅದಕ್ಕೆ ರೈತರು ನಿರ್ಲಕ್ಷಿಸದೆ ನಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿನ ಔಷಧಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತವೆ. ರೈತರು ತೆಗೆದುಕೊಂಡು ಸಿಂಪರಣೆ ಮಾಡಬೇಕು ಎಂದರು.
ಮೆಕ್ಕೆಜೋಳ ಬಿತ್ತನೆ ಹೊಸಕೆರೆ ಹೋಬಳಿಯಲ್ಲಿ ಸ್ವಲ್ಪ ತಡವಾಗಿದೆ. ಅಲ್ಲಿ ಲಘು ಪೋಷಕ ಔಷಧಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ತೆಗೆದುಕೊಂಡು ರೈತರು ಬೆಳೆಗಳಿಗೆ ಸಿಂಪರಣೆ ಮಾಡಬೇಕು ಮತ್ತು ನ್ಯಾನೋ ಯೂರಿಯಾ ಅರ್ಧ ಲೀಟರ್ ಬಾಟಲ್ ಬಂದಿದೆ. ಒಂದು ಎಕರೆಗೆ ಒಂದು ಬಾಟಲ್ ಹೊಲಗಳಿಗೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು. ಯೂರಿಯಾ ಮಿತವಾಗಿ ಬಳಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಆತ್ಮಯೋಜನೆಯ ಜಿಲ್ಲಾ ಸಂಯೋಜಕ ಚಂದ್ರಶೇಖರ್, ಇಪ್ಕೋ ಸಂಸ್ಥೆಯ ಪ್ರತಿನಿಧಿ ರಾಜೇಂದ್ರ ಪ್ರಸಾದ್, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅನಿಲ್ ಕುಮಾರ್ ಸೇರಿದಂತೆ, ರೈತರು ಭಾಗವಹಿಸಿದ್ದರು.