ನೂತನ ಕಾಯ್ದೆಗಳನ್ನು ವಿರೋಧಿಸಿ 22 ರಂದು ವಿಧಾನಸೌಧ ಚಲೋ

ದಾವಣಗೆರೆ, ಮಾ.15- ರೈತ-ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳ ರದ್ಧತಿಗಾಗಿ ಇದೇ ಮಾರ್ಚ್ 22 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 112 ದಿನಗಳಿಂದ ದೆಹಲಿ ಬಳಿ ನಡೆಯುತ್ತಿರುವ ರೈತ ಚಳವಳಿ ಇಡೀ ದೇಶದ ಜನರ ಸಲುವಾಗಿ ನಡೆಯುತ್ತಿರುವ ಚಳವಳಿಯಾಗಿದೆ ಎಂದರು.

ರಾಜ್ಯದಲ್ಲಿ 424 ಎಪಿಎಂಸಿ ಗಳಿವೆ. ಸುಮಾರು 7 ಲಕ್ಷ ಕೋಟಿ ರೂ. ಆಸ್ತಿಯನ್ನು ಎಪಿಎಂಸಿಗಳು ಹೊಂದಿವೆ. ಇವುಗಳನ್ನು ಬಲ ಪಡಿಸುವ ಬದಲು ದುರ್ಬಲ ಗೊಳಿಸುವ ಎಲ್ಲಾ ಕಾರ್ಯಗಳನ್ನೂ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗುವ ಮೂಲಕ ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳ, ಭೂ ಮಾಫಿಯಾಗಾರರ  ಪಾಲಾಗಲು ಸಹಕಾರ ನೀಡುತ್ತಿದೆ ಎಂದರು. ಗೋ ಹತ್ಯೆ ನಿಷೇಧಕ್ಕೆ ಮುಂದಾದ ಸರ್ಕಾರದ ಕ್ರಮದಿಂದ ರೈತರ ಬದುಕಿನ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ಕಾಯ್ದೆ ಜಾರಿಗೂ ಮುನ್ನ ಗೋ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಹೇಳಿದರು.

ಈ ಎಲ್ಲಾ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಸಿಟಿ ರೈಲ್ವೇ ನಿಲ್ದಾಣದಿಂದ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಅಧಿವೇಶನದಲ್ಲಿ 7 ತಾಸು ತ್ರಿಫೇಸ್ ವಿದ್ಯುತ್ ನೀಡುತ್ತಿರುವುದಾಗಿ ಸಚಿವರು ಹೇಳುತ್ತಾರೆ. ಆದರೆ ಇಲ್ಲಿ ಐದು ತಾಸೂ ಸಹ ನೀಡುತ್ತಿಲ್ಲ. ಅಧಿಕಾರಿಗಳು ಕೇಳಿದರೆ ಲೈನ್ ಸರಿ ಇಲ್ಲ ಎಂಬ ಕಾರಣ ಹೇಳುತ್ತಿದ್ದಾರೆ.  ಬೇಸಿಗೆ ವೇಳೆ ನೀರು ಸಮರ್ಪಕವಾಗಿ ಸಿಗದಿದ್ದರೆ ಇಳುವರಿ ಕಡಿಮೆಯಾಗಿ ಜಿಲ್ಲೆಯಲ್ಲಿಯೇ ಸಾವಿರ ಕೋಟಿ ರೂ. ನಷ್ಟ ಸಂಭವಿಸುತ್ತದೆ ಎಂದು ಹೇಳಿದರು.

ಕನಗೊಂಡನಹಳ್ಳಿ ಬಳಿ ಸುಮಾರು 12 ಕಿ.ಮೀ ಕಾಲುವೆ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೆ ನಾಲೆಯ ನೀರು ಹರಿಸಲಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕಾಲುವೆಯಲ್ಲಿ ನೀರು ಹರಿಸಬೇಕು. ಇಲ್ಲವೇ ಕಾಮಗಾರಿ ಹಣವನ್ನು ವಾಪಾಸ್ ಸರ್ಕಾರಕ್ಕೆ ಕೊಡಬೇಕು  ಎಂದರು.

ಕುರ್ಕಿಯಿಂದ ಮುಕ್ತೇನಹಳ್ಳಿ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಯಾವ ಜನಪ್ರತಿನಿಧಿಗಳಿಗೂ ಈ ಬಗ್ಗೆ ಆಸಕ್ತಿ ಇಲ್ಲವಾಗಿದೆ ಎಂದ ರವಿಕುಮಾರ್, ಈ ಬಗ್ಗೆ ಇದೇ ತಿಂಗಳ 31ರವ ರೆಗೆ ಗಡುವು ನೀಡುತ್ತೇವೆ. ರಸ್ತೆ ರಿಪೇರಿ ಮಾಡದ ಪಿಡಬ್ಲೂಡಿ ಇಲಾಖೆ, ವಿದ್ಯುತ್ ನೀಡದ ಬೆಸ್ಕಾಂ ಹಾಗೂ ನೀರು ಕೊಡದ ನೀರಾವರಿ ಇಲಾಖೆಗಳ ವಿರುದ್ಧ ಮುಂದಿನ ತಿಂಗಳು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ವಸಂತಕುಮಾರ್, ಇಟಗಿ ಬಸವರಾಜಪ್ಪ, ಪ್ರಸಾದ್, ಗದಿಗೇಶ್, ಅಶೋಕ ಗೌಡ್ರು ಮಾಯಕೊಂಡ, ಮಂಜುನಾಥ್ ಇತರರು ಉಪಸ್ಥಿತರಿದ್ದರು.

error: Content is protected !!