ವೈದ್ಯರಿಗೆ ಸೇವಾ ಮನೋಭಾವ ಅಗತ್ಯ

ಜಗಳೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ  ಎನ್.ಟಿ. ಯರಿಸ್ವಾಮಿ

ಜಗಳೂರು, ಆ.1- ವೈದ್ಯರಿಗೆ ಸೇವಾ ಮನೋಭಾವ ಅಗತ್ಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಟಿ. ಯರಿಸ್ವಾಮಿ  ತಿಳಿಸಿದರು. 

ಪಟ್ಟಣದ  ಶ್ರೀ ರಾಘವೇಂದ್ರ ಆಸ್ಪತ್ರೆ ಹಾಗೂ  ಲಯನ್ಸ್ ಕ್ಲಬ್, ಅಮ್ಮ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಇವರುಗಳ ಸಂಯುಕ್ತಾಶ್ರದಲ್ಲಿ ವೈದ್ಯರಾಗಿದ್ದ ದಿ. ಡಾ. ರಮೇಶ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈದ್ಯಕೀಯ ಸೇವೆಯನ್ನು ವಂಶ ಪಾರಂಪರಿಕವಾಗಿ ತಾಲ್ಲೂಕಿನ ಜನತೆಗೆ ನೀಡುತ್ತಿರುವ ದಿ|| ಡಾ. ಎಂ.ಆರ್.ಹನುಮಂತರೆಡ್ಡಿಯವರ ಕುಟುಂಬದ ಸೇವೆ ಶ್ರೇಷ್ಠವಾದ ಕಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಿ. ಡಾ. ಎಂ.ಆರ್. ಹನುಮಂತ ರೆಡ್ಡಿಯವರು ನೀಡುತ್ತಿದ್ದ ವೈದ್ಯಕೀಯ ಸೇವೆ ಸದಾ ನೆನಪಿನಲ್ಲಿ ಉಳಿಯಲು ಕಾರಣ, ಅವರ ಸೇವಾ ಮನೋಭಾವ,  ಶಿಸ್ತು, ಯಾವುದೇ ಜಾತಿ ಭೇದ ಭಾವವಿಲ್ಲದೆ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಿದ್ದರಿಂದ ಅವರ ಹೆಸರು ಇಂದಿಗೂ ಅಜರಾಮರ ಎಂದು ಹೇಳಿದರು. 

ಇವರ ಸುಪುತ್ರರಾದ ಡಾ. ರಮೇಶ್‌ರವರು ಸಹ ತಂದೆ ಹಾಕಿಕೊಟ್ಟ ದಾರಿಯಲ್ಲಿ ನಡೆದು ಜಗಳೂರು ತಾಲ್ಲೂಕಿನಲ್ಲಿ ವೈದ್ಯಕೀಯ ಸೇವೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈಗ ಅವರ ಪುತ್ರ ಡಾ. ಅನಿರುದ್ಧ್‌ ರಾಘವೇಂದ್ರ ಕೂಡ ತಂದೆಯಂತೆಯೇ ವೈದ್ಯರಾಗಿದ್ದು, ಸಮರ್ಥವಾಗಿ ಕೆಲಸ ಮಾಡಿ ಜನರ ಮನಸ್ಸು ಗೆಲ್ಲುವ ಕಾರ್ಯದಲ್ಲಿ ಯಶಸ್ಸು ಕಾಣಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಂಸ್ಥಾಪಕ ಹುಸೇನ್ ಮಿಯ್ಯಾ ಸಾಬ್, ಕಾರ್ಯದರ್ಶಿ ಡಾ. ಅನಿರುದ್ಧ್‌ ರಾಘವೇಂದ್ರ,  ವಿಜಯಲಕ್ಷ್ಮಿ ಡಾ. ರಮೇಶ್,  ವೆಂಕಟೇಶ್, ರಾಘವೇಂದ್ರ, ಲಯನ್ಸ್  ಅಮ್ಮ ಘಟಕದ ಅಧ್ಯಕ್ಷೆ ಆಶಾ ಬಸವರಾಜ್, ಕಾರ್ಯದರ್ಶಿ ಸವಿತಾ ಪ್ರಕಾಶ್‌ , ಖಜಾಂಚಿ  ಆರತಿ ಜಗದೀಶ್, ಶಾಹೀನ ಬೇಗಂ, ಅಮ್ಮ ಕ್ಲಬ್  ಸದಸ್ಯ ರಾದ ಸುಜಾತಮ್ಮ, ಫರ್ಜಾನ ಬಾನು, ಗೌರಮ್ಮ, ಶಾಹೀನಾ ಗೌಸ್, ಮಂಜುಳ, ಬಷೀರ್‍ಸಾಬ್, ಜಗದೀಶ್ ಗೌಡ್ರು, ಬಾಬು ರೆಡ್ಡಿ, ಲಿಯೋ ಲಯನ್ಸ್ ಕ್ಲಬ್ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!