ಜೂನ್ 7ರವರೆಗೆ ಲಾಕ್‌ಡೌನ್ ವಿಸ್ತರಣೆ

ಬೆಂಗಳೂರು, ಮೇ 21 – ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಅನ್ನು ಇನ್ನೂ ಹದಿನಾಲ್ಕು ದಿನಗಳ ಕಾಲ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಮೇ 24ಕ್ಕೆ ಅಂತ್ಯಗೊಳ್ಳಬೇಕಿದ್ದ ಲಾಕ್‌ಡೌನ್, ಜೂನ್ 7ರವರೆಗೆ ವಿಸ್ತರಣೆಯಾಗಿದೆ.

ರಾಜ್ಯದಲ್ಲಿ ಮೇ 10ರಿಂದಲೇ ಕಠಿಣ ನಿರ್ಬಂಧಗಳು ಜಾರಿಯಲ್ಲಿವೆ. ಮೇ 24ಕ್ಕೆ ಲಾಕ್‌ಡೌನ್ ಅಂತ್ಯಗೊಳ್ಳಬೇಕಿತ್ತಾದರೂ, ಅದನ್ನು ವಿಸ್ತರಿಸುವ ಎಲ್ಲಾ ಸೂಚನೆಗಳನ್ನು ಸರ್ಕಾರದ ಸಚಿವರು ನೀಡಿದ್ದರು. ಕೊವಿಡ್ ಕುರಿತ ಪರಿಣಿತರ ಸಮಿತಿ ಸಹ, ಲಾಕ್‌ಡೌನ್ ವಿಸ್ತರಣೆ ಕುರಿತು ಸಲಹೆ ನೀಡಿತ್ತು.

ಹಿರಿಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರರ ಜೊತೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್‌ಡೌನ್ ವಿಸ್ತರಿಸುವ ಘೋಷಣೆ ಮಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿರುವ ಯಡಿಯೂರಪ್ಪ, ಪರಿಣಿತರ ಸಲಹೆಯಂತೆ ಮೇ 24ರವರೆಗೆ ಇದ್ದ ಕಠಿಣ ನಿರ್ಬಂಧಗಳನ್ನು, ಜೂನ್ 7ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರಿಣಿತರ ಸಲಹೆಯಂತೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದವರು ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಜನರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಹಾಗೂ ಸ್ವಚ್ಛತೆ ಕ್ರಮಗಳನ್ನು ಅನುಸರಿಸಬೇಕು ಎಂದವರು ಹೇಳಿದ್ದಾರೆ.

ಈಗಿರುವ ಲಾಕ್‌ಡೌನ್ ಯಥಾಸ್ಥಿತಿ ಯಲ್ಲಿ ಮುಂದುವರೆಯುತ್ತದೆ. ಲಾಕ್‌ಡೌನ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿರುವ ಯಡಿಯೂರಪ್ಪ, ಹತ್ತು ಗಂಟೆಯ ನಂತರವೂ ಜನರು ಅಲೆದಾಡಬಾರದು. 9.45ರ ವೇಳೆಗೆ ಮನೆ ಕಡೆ ಹೊರಡಬೇಕು. ಇಲ್ಲವಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ. ಸರ್ಕಾರಿ ನೌಕರರ ವೇತನ ಕಡಿತ ಮಾಡುವ ಬಗ್ಗೆ ಸರ್ಕಾರ ಯಾವುದೇ ಯೋಚನೆ ಮಾಡಿಲ್ಲ ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಬ್ಲಾಕ್ ಫಂಗಸ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ಜಿಲ್ಲಾ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.

ಬಡವರು ಈ ರೋಗದ ಚಿಕಿತ್ಸಾ ವೆಚ್ಚ ಭರಿಸಲಾಗದು. ಹೀಗಾಗಿ ಬ್ಲಾಕ್ ಫಂಗಸ್‌ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡ ಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೊನಾ ಪ್ರಕರಣಗಳು ನಿಯಂತ್ರ ಣಕ್ಕೆ ಬಾರದ ಕಾರಣ ರಾಜ್ಯ ಸರ್ಕಾರ ಮೇ 10ರಂದು ಕಠಿಣ ನಿರ್ಬಂಧಗಳನ್ನು ವಿಧಿ ಸಿತ್ತು. ಈ ಲಾಕ್‌ಡೌನ್ ವಿಸ್ತರಿಸುವಂತೆ ಹಲ ವಾರು ಸಚಿವರು, ವಿಶೇಷವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಒತ್ತಾಯಿಸಿದ್ದರು.

error: Content is protected !!