ನಾವೆಲ್ಲರೂ ಬಳಸುತ್ತಿರುವ ಉಪ್ಪಿನಲ್ಲಿ ಪ್ಲಾಸ್ಟಿಕ್ ಅಂಶ ಇರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಇದರಿಂದ ಪ್ರಕೃತಿಯಲ್ಲಿ ವಿಪರೀತ ಏರುಪೇರಾಗುತ್ತಿದೆ. ಮಾನವ ಸೇರಿದಂತೆ ಜೀವ ಸಂಕುಲದಲ್ಲಿ
ಹೊಸ ಬಗೆಯ ರೋಗಗಳ ಬೆಳವಣಿಗೆಗೆ ಕಾರಣವಾಗಿದೆ.
– ತೇಜಸ್ವಿನಿ ಅನಂತಕುಮಾರ್
ದಾವಣಗೆರೆ, ಆ.1- ಪ್ರಜಾಪ್ರಭುತ್ವದ ಬಲವರ್ಧನೆ, ಉತ್ತಮ ನಾಯಕತ್ವ ಮತ್ತು ಸರಿಯಾದ ನೀತಿ, ನಿರೂಪಣೆಗಳಿಂದ ಜಾಗತಿಕವಾಗಿ ಭಾರತ ಬಲಾಢ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ವರ್ಚ್ಯುವಲ್ ವೇದಿಕೆ ಮುಖಾಂತರ ಉದ್ವಾಟಿಸಿ ಅವರು ಮಾತನಾಡಿದರು.
ಸಾವಿರಕ್ಕೂ ಹೆಚ್ಚು ವರ್ಷಗಳ ವಿದೇಶಿ ಆಕ್ರಮಣದಿಂದ ನಮ್ಮ ವಿಚಾರಧಾರೆಯನ್ನು ಗಾಸಿಗೊಳಿಸುವ ಹಲವಾರು ಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದರೂ ಇಡೀ ವಿಶ್ವಕ್ಕೇ ಶ್ರೇಷ್ಠ ಮಾನವ ಸಂಪನ್ಮೂಲವನ್ನು ಭಾರತ ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿಯೊಬ್ಬರ ಸಹಭಾಗಿತ್ವ, ಪಾಲು ದಾರಿಕೆಯಿಂದ ಮಾತ್ರ ಸಮಾಜ ಮತ್ತು ಪ್ರಕೃತಿಯಲ್ಲಿ ಆಗುತ್ತಿರುವ ಅಸಮತೋಲನ ವನ್ನು ತಹಬಂದಿಗೆ ತರಲು ಸಾಧ್ಯವಿದೆ. ಹೆಚ್ಚಿನ ಪ್ಲಾಸ್ಟಿಕ್ ಬಳಕೆ ಪ್ರಕೃತಿಯಲ್ಲಿ ಹಲವಾರು ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ. ಮುಂಬೈನ ಅಧ್ಯಯನ ಸಂಸ್ಥೆಯ ವರದಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇರುತ್ತಿದೆ. ಇದನ್ನು ಜಲಚರಗಳು ಸೇವಿಸುತ್ತಿರುವುದರಿಂದ ಅವುಗಳ ಜೀವಕ್ಕೆ ಹಾನಿಯಾಗುತ್ತಿದೆ. ಇದು ಆತಂಕಕಾರಿ ವಿಚಾರ ಎಂದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ ಮಾತನಾಡಿ, ಸ್ವಾತಂತ್ರ್ಯದ ನಂತರದ ಅಭಿವೃದ್ಧಿಗಳು ಮತ್ತು 21ನೇ ಶತಮಾನದಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಇಡೀ ವಿಶ್ವವೇ ಭಾರತವನ್ನು ಆಶಾಭಾವನೆ ಮತ್ತು ಗೌರವದಿಂದ ಕಾಣುತ್ತಿರುವುದರಿಂದ ಎಲ್ಲಾ ಭಾರತೀಯರು ಅಭಿಮಾನದಿಂದ ನಾನೊಬ್ಬ ಭಾರತೀಯನೆಂದು ಹೇಳಿಕೊಳ್ಳುವ ಕಾಲಘಟ್ಟದಲ್ಲಿ ನಾವಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಶರಣಪ್ಪ ವಿ ಹಲಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪೂರ್ವಿಕರು ಸ್ವಾತಂತ್ರ್ಯ ಪಡೆಯಲು ನಡೆಸಿದ ಹೋರಾಟವನ್ನು ತ್ಯಾಗ ಮತ್ತು ಬಲಿದಾನಗಳು ಯುವಜನರ ಪ್ರೇರಣೆ ಮತ್ತು ಸ್ಪೂರ್ತಿ ನೀಡುವ ಉದ್ಧೇಶದಿಂದ `ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ರಾಜ್ಯ ನೋಡಲ್ ಅಧಿಕಾರಿ ಕೆ.ಪ್ರಸನ್ನಕುಮಾರ್, ಸಿಂಡಿಕೇಟ್ ಸದಸ್ಯರಾದ ಡಾ.ಶ್ರೀಧರ್ ಎಸ್, ಡಾ. ಜೆ.ಪಿ.ರಾಮನಾಥ ಮಾತನಾಡಿದರು.
ಸಿಂಡಿಕೇಟ್ ಸದಸ್ಯರಾದ ಗೀತಾ ಜಿ. ಮಲ್ಲಿಕಾರ್ಜುನ್ ಮಾಡಾಳ್, ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ್, ಪವನ್ ಜಿ.ಎಮ್, ಇನಾಯತ್ಉಲ್ಲಾ ಟಿ. ಆಶಿಷ್ ರೆಡ್ಡಿ, ಕುಲಸಚಿವೆ (ಪರೀಕ್ಷಾಂಗ) ಪ್ರೊ. ಅನಿತಾ ಹೆಚ್.ಎಸ್., ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಉಪಸ್ಥಿತರಿದ್ದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಆಜಾದಿ ಕಾ ಅಮೃತ್ ಮಹೋತ್ಸವ ನೋಡಲ್ ಅಧಿಕಾರಿ ಡಾ. ಸತ್ಯನಾರಾಯಣ ವಂದಿಸಿದರು.