ಸಂಚಾರಿ ಆಸ್ಪತ್ರೆಗಳ ಪ್ರಾರಂಭಕ್ಕೆ ಆಗ್ರಹ

ದಾವಣಗೆರೆ, ಮೇ 19- ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್‌ಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಗುತ್ತಿಗೆ ದಿನಗೂಲಿ ಡಿ ಗ್ರೂಪ್ ಮತ್ತು ನಾನ್ ಕ್ಲಿನಿಕಲ್ ಮತ್ತು ಶುಶ್ರೂಷಕರು, ಕಂಪ್ಯೂಟರ್ ಆಪರೇಟರ್, ಅರೆ ವೈದ್ಯಾಧಿಕಾರಿಗಳು, ನಗರಸಭೆ, ಪುರಸಭೆ ಗುತ್ತಿಗೆ ಕಾರ್ಮಿಕರು, ಗ್ರಾಮ ಪಂಚಾ ಯತ್, ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಸರ್ಕಾರ ನೇರ ನೇಮಕಾತಿಗೊಳಿಸ ಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ. 

ಜಿಲ್ಲಾಸ್ಪತ್ರೆಯ ಗುತ್ತಿಗೆ ದಿನಗೂಲಿ ಕಾರ್ಮಿಕರಿಗೆ ಜಿಲ್ಲಾಡಳಿತವು ಕೊರೊನಾ ವಾಲಂಟಿಯರ್ಸ್ ಎಂಬ ಪತ್ರವನ್ನು ನೀಡಿರುವುದು ಬಿಟ್ಟರೆ ಯಾವುದೇ ಧನ ಸಹಾಯವನ್ನು ನೀಡಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಅಲ್ಲಿಯ ಗುತ್ತಿಗೆ ದಿನಗೂಲಿ ಕಾರ್ಮಿಕರಿಗೆ ಆಹಾರದ ಕಿಟ್ ನೀಡಬೇಕು ಎಂದು ಸಂಘಟನೆ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. 

ಹರಿಹರ ತಾಲ್ಲೂಕು ಆಸ್ಪತ್ರೆಗೆ ಭೇಟಿ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು 10ರಂದು ನಗರಕ್ಕೆ ಬಂದಾಗ ವೆಂಟಿಲೇಟರ್‌ಗಳನ್ನು ಪ್ರಾರಂಭಿಸುವುದಾಗಿ ಹೇಳಿ 9 ದಿನಗಳೇ ಕಳೆದರೂ ಇನ್ನೂ ಪ್ರಾರಂಭಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದು, ಧೂಳು ಹಿಡಿಯುತ್ತಿವೆ. ಅಲ್ಲಿರುವ ವೆಂಟಿಲೇಟರ್‌ಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸಂಚಾರಿ ಆಸ್ಪತ್ರೆಗಳನ್ನು ಜಿಲ್ಲಾಡಳಿತ ಪ್ರಾರಂಭಿಸಬೇಕು.  ಜಿಲ್ಲೆಯ ನ್ಯಾಯ ಬೆಲೆಯ ಅಂಗಡಿ ಮಾಲೀಕರು ಮತ್ತು ಕಾರ್ಯದರ್ಶಿಗಳು ಸರ್ಕಾರದಿಂದ ಕಮೀಷನ್ ಹಣವನ್ನು 5 ತಿಂಗಳಿಂದ ನೀಡಿಲ್ಲ.  ನ್ಯಾಯ ಬೆಲೆಯ ಅಂಗಡಿಗಳು 500, 1000 ಪಡಿತರ ಚೀಟಿದಾರರಿಗೆ ಪಡಿತರವನ್ನು ವಿತರಿಸುತ್ತಿದ್ದು, ಕೊರೊನಾ ವಾರಿಯರ್‌ ಎಂದು ಪರಿಗಣಿಸಿ ಅವರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಮಹ್ಮದ್ ಕಲೀಮ್ ಸೇರಿದಂತೆ ಇತರರು ಇದ್ದರು.

error: Content is protected !!