ಶಾಸಕ ರಾಮಪ್ಪ ತರಾಟೆ
ಮಲೇಬೆನ್ನೂರು, ಮೇ 19- ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್. ರಾಮಪ್ಪ ಅವರು ಯಲವಟ್ಟಿ, ಜಿಗಳಿ, ಕುಂಬಳೂರು, ಹಾಲಿವಾಣ, ಹರಳಹಳ್ಳಿ ಮತ್ತು ಕುಣೆಬೆಳಕೆರೆ ಗ್ರಾ.ಪಂ. ಗಳಲ್ಲಿ ಜಾಗೃತಿ ಸಭೆ ನಡೆಸಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು, ಗ್ರಾಮಗಳಲ್ಲಿ ಶೀತ, ಜ್ವರ, ಕೆಮ್ಮು, ಲಕ್ಷಣಗಳಿರುವ ಜನರ ಮನೆಗಳಿಗೆ ತೆರಳಿ ಅವರನ್ನು ಕೋವಿಡ್ ಟೆಸ್ಟ್ ಮಾಡಿಸಲು ಶ್ರಮಿಸಿ ಎಂದು ಗ್ರಾ.ಪಂ. ಟಾಸ್ಕ್ಪೋರ್ಸ್ ಸಮಿತಿಗೆ ಸೂಚಿಸಿದರು.
ಹರಿಹರ ಆಸ್ಪತ್ರೆಯಲ್ಲೀಗ 60 ಆಕ್ಸಿಜನ್ ಬೆಡ್ಗಳಿದ್ದು, ಅದನ್ನು 100ಕ್ಕೆ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶಾಸಕರು ಹೇಳಿದರು.
ಜಿಗಳಿ ಗ್ರಾ.ಪಂ. ಕಚೇರಿಯಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದ ತಾ.ಪಂ. ಇಒ ಗಂಗಾಧರಪ್ಪ ಅವರು, ಕೊರೊನಾ ನಿಯಂತ್ರಣದಲ್ಲಿ ಜಿಗಳಿ ಗ್ರಾ.ಪಂ. ಉತ್ತಮ ಸಾಧನೆ ಮಾಡಿದೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಹೆಚ್. ಮಂಜುನಾಥ್, ಬಿ. ಎಂ. ದೇವೇಂದ್ರಪ್ಪ ಅವರು ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದರೆ ಈ ಭಾಗದ ಜನರಿಗೆ ಸಹಕಾರಿ ಆಗುತ್ತದೆ ಎಂದು ಶಾಸಕರಲ್ಲಿ ಕೋರಿದರು.
ಗ್ರಾ.ಪಂ. ಉಪಾಧ್ಯಕ್ಷ ಜಿ. ಬೇವಿನಹಳ್ಳಿಯ ಆನಂದಗೌಡ ಅವರು, ಸದ್ಯದ ಪರಿಸ್ಥಿತಿಯಲ್ಲಿ ಗ್ರಾ.ಪಂ. ವ್ಯಾಪ್ತಿಗೊಂದು ಆಕ್ಸಿಜನ್ ಆಂಬ್ಯುಲೆನ್ಸ್ ಸೌಲಭ್ಯ ಮಾಡಿಕೊಡಿ ಎಂದು ಕೇಳಿದರು.
ಪಿಡಿಒ ದಾಸರ ರವಿ ಮಾತನಾಡಿ, ಗ್ರಾಮ ದಲ್ಲಿ ಇದುವರೆಗೆ 5 ಜನರಿಗೆ ಸೋಂಕು ತಗು ಲಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. 2 ಕೇಸ್ ಸಕ್ರಿಯ, ಒಬ್ಬರು ಗುಣಮುಖರಾಗಿದ್ದಾರೆ ಎಂದರು.
ಆರೋಗ್ಯ ಸಹಾಯಕರಾದ ಶ್ರೀಮತಿ ಆರೋಗ್ಯವಾಣಿ, ಗ್ರಾ.ಪಂ. ಅಧ್ಯಕ್ಷೆ ಕರಿಯಮ್ಮ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಗ್ರಾ.ಪಂ. ಸದಸ್ಯರಾದ ಎನ್.ಎಂ. ಪಾಟೀಲ್, ಡಿ.ಎಂ. ಹರೀಶ್, ಕೆ.ಜಿ. ಬಸವರಾಜ್, ವಿನೋದಮ್ಮ ಹಾಲೇಶ್ ಕುಮಾರ್, ವೈ. ಚೇತನ್ಕುಮಾರ್, ರೇಣುಕ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಗ್ರಾಮ ಲೆಕ್ಕಾಧಿಕಾರಿ ಸುಭಾನಿ, ಪ್ರೊಬೇಷನರಿ ಪಿಎಸ್ಐ ಶರಣ ಬಸಪ್ಪ ಮತ್ತಿತರರು ಸಭೆಯಲ್ಲಿದ್ದರು.
ಕುಂಬಳೂರು ಗ್ರಾ.ಪಂ.ನಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಕೊರೊನಾ ಸೋಂಕಿತರು ಮನೆಯಿಂದ ಹೊರಗಡೆ ಬಂದು ಸುತ್ತಾಡುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕ ರಾಮಪ್ಪ, ತಾ.ಪಂ. ಇಒ ಗಂಗಾಧರಪ್ಪ ಅವರು ಪಿಡಿಒ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕುಂಬಳೂರಿನಲ್ಲಿ 28 ಕೊರೊನಾ ಪ್ರಕರಣ ಗಳಿದ್ದು, ಗ್ರಾಮದಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಿ ಎಂದು ತಾಕೀತು ಮಾಡಿದರು.
ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್, ಉಪತಹಶೀಲ್ದಾರ್ ರವಿ ಹಾಗೂ ಗ್ರಾ.ಪಂ. ಸದಸ್ಯರು, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್ ಮೂರ್ತಿ ಇನ್ನಿತರರು ಸಭೆಯಲ್ಲಿದ್ದರು.
ಹಾಲಿವಾಣ ಗ್ರಾ.ಪಂ.ನಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಐ.ಪಿ. ರಂಗನಾಥ್, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಉಪ ತಹಶೀಲ್ದಾರ್ ರವಿ, ಪಿಡಿಒ ಕೆ.ಎಸ್. ರಮೇಶ್ ಮತ್ತಿತರರು ಭಾಗವಹಿಸಿದ್ದರು.