ದಾವಣಗೆರೆ, ಮೇ 18- ಕೋವಿಡ್ ಲಕ್ಷಣಗಳಿರುವವರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. ಕೋವಿಡ್ ರೋಗದ ಸೋಂಕು ಇರುವಂತಹವರು ಅಂದರೆ ಕೆಮ್ಮು, ಶೀತ ತಲೆನೋವುಗಳಂತಹ ಲಕ್ಷಣಗಳು ಇರುವವರು ಕೂಡಲೇ ರಾಪಿಡ್ ಟೆಸ್ಟ್ ಮಾಡಿಸಿಕೊಂಡು ಒಂದು ವೇಳೆ ಪಾಸಿಟಿವ್ ಬಂದರೆ ಕೂಡಲೇ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಬೇಕು. ಆ ಮೂಲಕ ಸೋಂಕಿನ ಕೊಂಡಿ ಮುರಿಯಲು ಜಿಲ್ಲಾಡಳಿತಕ್ಕೆ ಸಹಕಾರ ಮಾಡಬೇಕು
ಕೋವಿಡ್ನ ಲಕ್ಷಣಗಳಿದ್ದರೂ ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಔಷಧಿ ತೆಗೆದುಕೊಂಡು ಗುಣಮುಖರಾಗದೇ ಸೋಂಕು ಶ್ವಾಸಕೋಶಕ್ಕೆ ತಗುಲಿ ಆಕ್ಸಿಜನ್ ಸ್ಯಾಚುರೇಷನ್ ಶೇಕಡ 80 ಕ್ಕಿಂತ ಕಡಿಮೆಯಾದರೆ ವೈದ್ಯರಿಗೆ ತಮ್ಮನ್ನು ಗುಣಪಡಿಸುವುದು ಸವಾಲಿನ ಕೆಲಸವಾಗಿದ್ದು ಗುಣಮುಖರಾಗುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಸೋಂಕಿನ ಲಕ್ಷಣಗಳು ಕಂಡು ಬಂದವರು ಟೆಸ್ಟ್ ಮಾಡಿಸಿಕೊಂಡು ಪಾಸಿಟಿವ್ ಬಂದವರು ಐಸೋಲೇಷನ್ ಆಗುವ ಮೂಲಕ ತಮ್ಮನ್ನು, ತಮ್ಮವರನ್ನು ರಕ್ಷಣೆ ಮಾಡಿಕೊಳ್ಳುವ ಮೂಲಕ ಕುಟುಂಬದ ರಕ್ಷಣೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.