ಹರಪನಹಳ್ಳಿಯಲ್ಲಿ ಎನ್ಎಸ್ಯುಐ ಪ್ರತಿಭಟನೆ
ಹರಪನಹಳ್ಳಿ, ಜು.29- ಡಿಪ್ಲೋಮಾ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿದಂತೆ ಅಂತಿಮ ವರ್ಷದ ವಿದ್ಯಾರ್ಥಿಗಳ ಮೂರು ಹಂತದ ಪರೀಕ್ಷೆಗಳನ್ನು ರದ್ದುಪಡಿಸಿ, ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸಬೇಕೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್.ಎಸ್.ಯು.ಐ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಎನ್ಎಸ್ಯುಐ ನೇತೃತ್ವದಲ್ಲಿ ಪಟ್ಟಣದ ಐಬಿ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ವಿದ್ಯಾರ್ಥಿಗಳು, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಡಂಕಿ ವಾಸಿಂ ಮಾತನಾಡಿ, ಇಡೀ ರಾಜ್ಯಾದ್ಯಂತ ಕಳೆದ ಒಂದು ತಿಂಗಳಿಂದ ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ನಡೆಸಿದ ಹೋರಾಟವನ್ನು ಗಮನದಲ್ಲಿರಿಸಿಕೊಂಡು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದೇ ಮಾನದಂಡವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಅನ್ವಯ ಮಾಡಬೇಕು. ಇಲ್ಲವಾದಲ್ಲಿ ಪರೀಕ್ಷಾ ಬಹಿಷ್ಕಾರಕ್ಕೆ ನಾವೆಲ್ಲ ಸಜ್ಜಾಗಲಿದ್ದೇವೆ ಎಂದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಿನಲ್ಲಿ ಮೂರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಇದು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಂದಿಸಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೊರೊನಾ ಸಂದರ್ಭದ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಕೂಡ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕನಿಷ್ಟ ಯಾವುದಾದರೂ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಹೀಗಾದಲ್ಲಿ ರಾಜ್ಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ವಾಸಿಂ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೀಷಾನ್ ಹ್ಯಾರಿಸ್, ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಸಾಧಿಕ್, ಯುವ ಕಾಂಗ್ರೆಸ್ ಮುಖಂಡರಾದ ಎಸ್. ಅಬ್ಬು, ಸದಸ್ಯರುಗಳಾದ ಸಮೀರ್, ಬಿ. ಮೋಹನ್ ಕುಮಾರ್, ಎಲ್.ಯು. ಬೀರಪ್ಪ, ದೊರೆ ಬಂಜಾರ್, ಸೂರ್ಯ ನಾಯ್ಕ್ , ವೆಂಕಟೇಶ್ ತೆಲಿಗಿ, ಮಂಜು ನಾಯ್ಕ್, ಉಪೇಂದ್ರ, ಮನೋಹರ, ಅರುಣ್, ಎಸ್. ಕುಮಾರ್, ಕಿರಣ್ ಕುಮಾರ್, ಗಿರೀಶ್ ಕಟ್ಟಿ, ಮಾರುತಿ, ಕಾರ್ತಿಕ್, ಸುನೀಲ್ ಕುಮಾರ್, ಹೇಮಂತ್ಕುಮಾರ್, ಮಂಜುನಾಥ್, ಸುದೀಪ್, ಅರುಣ್ ಕುಮಾರ್, ಸಂದೀಪ್ , ಹೇಮಂತ್, ಕುಮಾರ್, ಎಸ್. ಕಿರಣ್, ವೀರು, ಗಾಂಧಿ ಉಲ್ಲಂಗಿ ರಫೀಕ್ , ಶಾಕಿಬ್ ಶಾಸ್ತ್ರಿ, ನಫಾಜ್, ರಫೀಕ್ ಇನ್ನಿತರರಿದ್ದರು.