ಸರ್ಕಾರಿ ಬೆಡ್ ಕೊಟ್ಟರೆ ಸಾಕು ಅದೇ ಉಪಕಾರ ಮಾಡಿದಂತೆ : ವೀರೇಶ್ ಹನಗವಾಡಿ

ಸರ್ಕಾರಿ ಬೆಡ್ ಕೊಟ್ಟರೆ ಸಾಕು ಅದೇ ಉಪಕಾರ ಮಾಡಿದಂತೆ : ವೀರೇಶ್ ಹನಗವಾಡಿ - Janathavaniದಾವಣಗೆರೆ, ಮೇ 18- ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮೊದಲು ಬಾಪೂಜಿ ಆಸ್ಪತ್ರೆ, ಎಸ್‍ಎಸ್ ಹೈಟೆಕ್ ಆಸ್ಪತ್ರೆಗಳಲ್ಲಿರುವ ಸರ್ಕಾರಿ ಕೋಟಾದ ಬೆಡ್ ಬಿಟ್ಟು ಕೊಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸವಾಲು ಹಾಕಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಲಸಿಕೆ ಕೊಟ್ಟಲ್ಲಿ ಅದರ ಅರ್ಧ ವೆಚ್ಚ ಒಂಬತ್ತು ಕೋಟಿ ರೂ. ತಾವು ಭರಿಸುವುದಾಗಿ ಹೇಳಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಟೀಕಿಸಿದ ಅವರು, ಜನರಿಗೆ ಸರ್ಕಾರ ಲಸಿಕೆ ಉಚಿತವಾಗಿ ಕೊಡುತ್ತಿದೆ. ಹೀಗಿರುವಾಗ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಲಸಿಕೆಗಾಗಿ ಹಣ ಕೊಡುವ ಅಗತ್ಯವಿಲ್ಲ. ಅದರ ಬದಲು ಸರ್ಕಾರಕ್ಕೆ ಕೊಡಬೇಕಾದ ತಮ್ಮ ಆಸ್ಪತ್ರೆಗಳ ಬೆಡ್‍ ಅನ್ನು ಕೊಟ್ಟರೆ ಸಾಕು, ಅದೇ ಉಪಕಾರ ಮಾಡಿದಂತಾಗುತ್ತದೆ ಎಂದು ಮನವಿ ಮಾಡಿದರು.

ಬಾಪೂಜಿ ಆಸ್ಪತ್ರೆ ಮತ್ತು ಎಸ್‍ಎಸ್‍ ಹೈಟೆಕ್ ಆಸ್ಪತ್ರೆಯಲ್ಲಿ ತಲಾ 850 ಬೆಡ್‍ಗಳಿವೆ. ಅದರಲ್ಲಿ ಸರ್ಕಾರ ರೂಪಿಸಿರುವ ನೀತಿಯಂತೆ ಶೇ.75ರಷ್ಟು ಬೆಡ್‍ಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕಿದೆ. ಅಂತೆಯೇ ಈ ಎರಡೂ ಆಸ್ಪತ್ರೆಗಳಿಂದ 1100 ಬೆಡ್‍ಗಳನ್ನು ಕೊಡಬೇಕಾಗಿದೆ. ಬಾಪೂಜಿ ಆಸ್ಪತ್ರೆಯಲ್ಲಿ 23 ಬೆಡ್‍ಗಳು, ಎಸ್‍ಎಸ್ ಹೈಟೆಕ್ ಆಸ್ಪತ್ರೆಯಲ್ಲಿ 92 ಬೆಡ್‍ಗಳನ್ನು ಮಾತ್ರ ಕೊಡಲಾಗಿದೆ. ಉಳಿದ ಬೆಡ್‍ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಹಣ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಕೊರೊನಾ ಸಂಕಷ್ಟದ ಕಾಲದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಜಕಾರಣ ಮಾಡಿ, ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವಾರಿ ಯರ್‌ಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ ಎಂದು ಮನವಿ ಮಾಡಿದರು.  

ಕೊರೊನಾ ವಾರಿಯರ್‌ಗಳು ನ್ಯಾಯಯುತ ಮತ್ತು ತಮ್ಮ ಕುಟುಂಬ, ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್‌ಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಕೊರೊನಾದಿಂದ ಪ್ರತಿಯೊಬ್ಬರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕೊರೊನಾ ವಿರುದ್ದ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು. ಅದಕ್ಕೆ ಎಲ್ಲರೂ ಕೈ ಜೋಡಿಸಿ ಎಂದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್, ಯಶವಂತ ರಾವ್ ಜಾಧವ್, ಶಿವಶಂಕರ್ ಗೋಷ್ಠಿಯಲ್ಲಿದ್ದರು.

error: Content is protected !!