ಶೋಷಿತ ಮಹಿಳೆಯರು ಹಿಂಜರಿಯದೆ ಹೋರಾಟ ನಡೆಸಿ : ಮಹಾಪೌರ ವೀರೇಶ್

ದಾವಣಗೆರೆ, ಮಾ.11- ಮಹಿಳೆಯರು ಶೋಷಣೆ ಗೊಳಗಾದಾಗ, ಹಿಂಜರಿಯದೇ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು  ಎಂದು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಹೇಳಿದರು.

ಪಾಲಿಕೆ ಆವರಣದ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರ ಮೇಲೆ ದೌರ್ಜನ್ಯ, ಅಪಚಾರಗಳು ನಡೆದಾಗ ದೇಶದಲ್ಲಿ ಸಾಕಷ್ಟು ಪ್ರಬಲ ಕಾನೂನುಗಳಿವೆ. ಅನ್ಯಾಯಕ್ಕೊಳಗಾದ ಮಹಿಳೆಯರು ಹಿಂಜರಿಯದೇ ಪ್ರತಿಭಟಿಸಬೇಕು ಎಂದರು. ಪಾಲಿಕೆ ಮಹಿಳಾ ನೌಕರರ ಸಲಹೆಯಂತೆ ಒಂದು ಸಮಿತಿ ರಚಿಸಿ, ಅವರ ಕುಂದು-ಕೊರತೆಗೆ ಅವಕಾಶ ನೀಡಲಾಗುವುದು. ನೌಕರರು-ಜನಪ್ರತಿನಿಧಿಗಳು ಎರಡು ಚಕ್ರಗಳಿದ್ದಂತೆ. ಸಮಾನಾಂ ತರವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಆದ್ದರಿಂದ ನಿಮಗೆ ನಾವು ಸದಾ ಸಹಕಾರ ನೀಡುತ್ತೇವೆ ಎಂದರು. 

ಉಪ ಆಯುಕ್ತೆ ನಳಿನ ಮಾತನಾಡಿ, ಪ್ರತಿಯೊಂದು ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪನ್ನು ಮೂಡಿಸಿ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಂಥವರಿಗೆ ಭದ್ರತೆ ಮತ್ತು ಪ್ರೋತ್ಸಾಹದ ಕೊರತೆ ಇದೆ. ಅದನ್ನು ನೀಗಿಸಬೇಕಾಗಿದೆ ಎಂದರು.

ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಮಾತನಾಡಿ ಸಹನೆ, ತಾಳ್ಮೆಗೆ ಮತ್ತೊಂದು ಹೆಸರು ತಾಯಿ. ಮಹಿಳೆಗೆ ಎಷ್ಟೇ ಕಷ್ಟಗಳಿದ್ದರೂ ತನ್ನ ಒಡಲಲ್ಲಿ ಇಟ್ಟುಕೊಂಡು ನಮ್ಮ ಏಳ್ಗೆಗೆ, ನಮ್ಮ ಸಹಕಾರಕ್ಕೆ ಬರುತ್ತಾರೆ. ಅದೇ ರೀತಿ ನಾವು ಕೂಡ ಹೆಣ್ಣನ್ನು ಪೂಜಿಸಿ ಪೋಷಿಸಬೇಕು. ಅವರ ಕಷ್ಟ-ಸುಖಗಳಲ್ಲಿ ನಾವು ಭಾಗಿಯಾಗಿ ಅವರ ಋಣ ತೀರಿಸಬೇಕೆಂದರು.

ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್‌ ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿ ಬಜೆಟ್‍ನಲ್ಲಿ 37 ಸಾವಿರ ಕೋಟಿ ರೂಪಾಯಿಯನ್ನು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಮುಖ್ಯಮಂತ್ರಿ ಮೀಸಲಿಟ್ಟಿದ್ದಾರೆ. ನೌಕರರುಗಳಾದ ನಾಗರಾಜ್, ಚಂದ್ರಪ್ಪ, ನಾಗರತ್ನಮ್ಮ ಮಾತನಾಡಿ, ಹೆಣ್ಣು ಶೋಷಣೆ ಸ್ಥಾನದಲ್ಲಿ ನಿಲ್ಲುತ್ತಿದ್ದಾಳೆ. ಆ ರೀತಿ ಆಗದಂತೆ ಅವರಿಗೆ ಗೌರವ ನೀಡಿ, ಪೋಷಣೆ ಮಾಡುವ ಅವಶ್ಯಕತೆ ಇದೆ ಎಂದರು.

ಸಮಾರಂಭದಲ್ಲಿ ನೀಲಗಿರಿಯಪ್ಪ, ಮಂಜುನಾಥ, ನರೇಂದ್ರಕುಮಾರ್, ಮಂಜಾನಾಯ್ಕ, ಪ್ರಭು ಇನ್ನಿತರರಿದ್ದರು. ನಳಿನ, ನಾಗರತ್ನಮ್ಮ ಮಲ್ಲಿಕಾರ್ಜನ್, ಗೌರಮ್ಮ, ಸುನಂದ ಅವರನ್ನು ಸನ್ಮಾನಿಸಲಾಯಿತು.

error: Content is protected !!