ದಾವಣಗೆರೆ, ಮೇ 16- ಮಹಾರಾಷ್ಟ್ರ ರಾಜ್ಯಕ್ಕೆ ಅನ್ಯರಾಜ್ಯಗಳ ಸರಕು ಸಾಗಾಣೆ ವಾಹನಗಳು ಹೋಗಬೇಕಾದರೆ ಕೊರೊನಾ ನೆಗೆಟಿವ್ ವರದಿ ಇರಬೇಕೆಂಬ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆದಿದೆ ಎಂದು ಲಾರಿ ಮಾಲೀಕರ ಮತ್ತು ಟ್ರಾನ್ಸ್ಪೋರ್ಟ್ ಏಜೆಂಟರ ರಾಜ್ಯ ಸಂಘದ ಉಪಾಧ್ಯಕ್ಷ ಸೈಯದ್ ಸೈಫುಲ್ಲಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹಾಗೂ ಅಖಿಲ ಭಾರತ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಅಗತ್ಯ ವಸ್ತುಗಳ ಪೂರೈಕೆ ಹಾಗೂ ವಿವಿಧ ಕಾರ್ಖಾನೆಗಳಿಗೆ ಬೇಕಾಗಿರುವ ಕಚ್ಚಾ ತೈಲ ಪೂರೈಸಲು ಸರಕು, ಸಾರಿಗೆಗಳಿಗೆ ಅವಕಾಶ ನೀಡಿದ್ದರೂ ಬೇರೆ ರಾಜ್ಯಗಳಿಂದ ಸರಕು ವಾಹನಗಳು ಮಹಾರಾಷ್ಟ್ರ ಪ್ರವೇಶಿಸಲು 48 ಗಂಟೆಗಳ ಒಳಗಾಗಿ ಮಾಡಿಸಿರುವ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿರುವ ಬಗ್ಗೆ ಎಲ್ಲಾ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಖಿಲ ಭಾರತ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಸಹ ಖಂಡಿಸಿತ್ತು. ರಾಜ್ಯ ಹಾಗೂ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್ಪೋರ್ಟ್ ಏಜೆಂಟರ ಸಂಘವು ವಿರೋಧಿಸಿತ್ತು ಎಂದು ಅವರು ಹೇಳಿದ್ದಾರೆ.