ತುರ್ತು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಸ್ಪಂದಿಸದ ಸರ್ಕಾರ

ತುರ್ತು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಸ್ಪಂದಿಸದ ಸರ್ಕಾರ - Janathavani ತುರ್ತು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಸ್ಪಂದಿಸದ ಸರ್ಕಾರ - Janathavaniಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಕಿಡಿ

ದಾವಣಗೆರೆ, ಮೇ 16- ಜಿಲ್ಲೆಗೆ ತುರ್ತಾಗಿ ಬೇಕಾಗುವಂತಹ ವೈದ್ಯಕೀಯ ಆಮ್ಲಜನಕದ ಉತ್ಪಾದನಾ ಘಟಕ, ಆಮ್ಲಜನಕ ಸಮಾಲೋಚಕಗಳನ್ನು ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರೂ ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಇದನ್ನು ಗಮನಿಸಿದರೆ, ಸರ್ಕಾರ ದಿವಾಳಿ ಆಗಿದೆ ಎಂದು ಅನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಕಿಡಿಕಾರಿದರು. 

ರೋಗಿಗಳಿಗೆ ಅಗತ್ಯ ಇರುವ ಔಷಧಿ, ಲಸಿಕೆ, ಆಮ್ಲಜನಕ ಪೂರೈಕೆ ಮಾಡುವಲ್ಲಿ ಮತ್ತು ಕೊರೊನಾ ಮಹಾಮಾರಿಯನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಜನರು ಸಾವು-ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ, ಸರ್ಕಾರ ಈ ಕೂಡಲೇ ಆಕ್ಸಿಜನ್ ಬೆಡ್‍ಗಳ ಸಂಖ್ಯೆ ವೃದ್ಧಿಸಬೇಕು. ಕೂಲಿ ಕಾರ್ಮಿಕರು, ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಉಂಟಾಗಿರುವ ಆಮ್ಲಜನಕದ ಕೊರತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಂಸದರು, ಮುಖ್ಯಮಂತ್ರಿಗಳು ಚರ್ಚೆ ಮಾಡಿಲ್ಲ. ಅವರ ಮೇಲೆ ಒತ್ತಡ ಹಾಕಿ ಆಮ್ಲಜನಕ ತರುವಲ್ಲಿ ಶಕ್ತಿ ಪ್ರದರ್ಶಿಸಿಲ್ಲ. ಇದೇ ಪರಿಸ್ಥಿತಿ ಜಿಲ್ಲೆಯಲ್ಲೂ ಇದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ ಸಮರ್ಪಕವಾಗಿ ನೀಗಿಸುತ್ತಿಲ್ಲ ಎಂದು ದೂರಿದರು.

ವೆಂಟಿಲೇಟರ್ ಬಳಕೆ ಸಮರ್ಪಕವಿಲ್ಲ: ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಉಂಟಾಗಿದೆ. ಕಾರಣ ನಗರದ ಜಿಲ್ಲಾಸ್ಪತ್ರೆಯಲ್ಲಿರುವ ವೆಂಟಿಲೇಟರ್‍ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿದರು.

ವ್ಯಾಕ್ಸಿನ್ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಪ್ರತಿ ದಿನ ಜನರು ಕೇಂದ್ರಗಳ ಬಳಿ ವ್ಯಾಕ್ಸಿನ್ ಸಿಗದೆ ವಾಪಸ್ ಹೋಗುವಂತಾಗಿದೆ. ಜಿಲ್ಲಾಡಳಿತ ವ್ಯಾಕ್ಸಿನ್ ನೀಡುವ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕೋವಿಡ್ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ಜಿಲ್ಲೆಯಲ್ಲಿ ಬೆಡ್, ಆಕ್ಸಿಜನ್ ಪಡೆಯಲು ಪರದಾಟ ಮಾಡಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ ಉಪಸ್ಥಿತರಿದ್ದರು.

error: Content is protected !!