ಅಭಿನಯ ಶಾರದೆ ಜಯಂತಿ ಇನ್ನಿಲ್ಲ

ಅಭಿನಯ ಶಾರದೆ ಜಯಂತಿ ಇನ್ನಿಲ್ಲ - Janathavaniಬೆಂಗಳೂರು, ಜು. 26 – ಅಭಿನಯ ಶಾರದೆ ಎಂದೇ ಹೆಸರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ.  

ಅಸ್ತಮಾದಿಂದ ಬಳಲುತ್ತಿದ್ದ 76 ವರ್ಷದ ನಟಿ ಜಯಂತಿ ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. 

ಅಮ್ಮ ತಡರಾತ್ರಿ ಕೊನೆಯುಸಿರೆಳೆದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಡರಾತ್ರಿ ನಮ್ಮನ್ನಗಲಿದರು ಎಂದು ಜಯಂತಿ ಅವರ ಪುತ್ರ ಕೃಷ್ಣಕುಮಾರ್ ತಿಳಿಸಿದ್ದಾರೆ.

ಜನವರಿ 6, 1945 ರಂದು ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ತಾಯಿ ಸಂತಾನಲಕ್ಷ್ಮಿ. ಚಿಕ್ಕವಯಸ್ಸಿನಲ್ಲೇ ಚಿತ್ರೀಕರಣದ ಸ್ಟುಡಿಯೋಗಳಿಗೆ ತೆರಳುತ್ತಿದ್ದ ಬಾಲಕಿ ಕಮಲಾ ಕುಮಾರಿ ಸಿನಿಮಾ ಸೆಳೆತಕ್ಕೆ ಸಿಲುಕಿದರು. ಜಯಂತಿ ಎಂದೇ ಹೆಸರಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದರು. ಮೊದಲು ತೆಲುಗು ಹಾಗೂ ತಮಿಳಿನಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರು, ವೈ.ಆರ್. ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದಲ್ಲಿ ದೊಡ್ಡ ಅವಕಾಶ ಪಡೆದರು. ಸ್ವಾಮಿ ಅವರೇ ಕಮಲಾ ಕುಮಾರಿಗೆ ಜಯಂತಿ ಎಂಬ ಹೆಸರಿಟ್ಟಿದ್ದರು. ಚಿತ್ರ ಹಿಟ್ ಆದಂತೆ, ಜಯಂತಿ ಭದ್ರ ನೆಲೆ ಕಂಡರು.

ಡಾ.ರಾಜ್‌ಕುಮಾರ್ ಜೊತೆಗೆ ‘ಚಂದವಳ್ಳಿಯ ತೋಟ’ ಸಿನಿಮಾದಲ್ಲಿ ನಾಯಕಿಯಾಗಿ ಜಯಂತಿ ಅಭಿನಯಿಸಿದರು. ವರನಟ ಡಾ.ರಾಜ್‌ಕುಮಾರ್ ಜೊತೆಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಜಯಂತಿ ಅವರದ್ದು. 

ಕಲಾವತಿ, ತುಂಬಿದ ಕೊಡ, ಬೆಟ್ಟದ ಹುಲಿ, ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ, ಧರ್ಮ ದಾರಿ ತಪ್ಪಿತು, ಮಸಣದ ಹೂ ಮುಂತಾದ ಚಿತ್ರಗಳು ಜಯಂತಿಗೆ ಜನಪ್ರಿಯತೆ ತಂದುಕೊಟ್ಟಿದ್ದವು.

ಜಯಂತಿ ಗ್ಲಾಮರ್‌ಗಾಗಿ ವಿಶೇಷವಾಗಿ ಹೆಸರು ಮಾಡಿದ್ದರು. ಯಾವುದೇ ಪಾತ್ರಕ್ಕೆ ಜೀವ ತುಂಬುತ್ತಿದ್ದ ಜಯಂತಿ, ರಾಮಾಚಾರಿ ಚಿತ್ರದ ಒನಕೆ ಓಬವ್ವನ ಹಾಡಿನಲ್ಲಿ ಒಂದೇ ಹಾಡಿನಲ್ಲಿ ಕಾಣಿಸಿಕೊಂಡರೂ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಛಾಪು ಮೂಡಿಸಿದ್ದರು. 

ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದುಕೊಂಡಿದ್ದಾರೆ.

ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದೆ.

ಜಯಂತಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಮತ್ತು ನನ್ನ ಇಷ್ಟದ ನಟಿ ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖ ವಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

error: Content is protected !!