ಶಿಕ್ಷಕ ವೃತ್ತಿಗಿಂತ ಶ್ರೇಷ್ಠ ವೃತ್ತಿ ಬೇರೊಂದಿಲ್ಲ

ಜಗಳೂರು, ಜು.26- ಶಿಕ್ಷಕ ವೃತ್ತಿಗಿಂತ ಶ್ರೇಷ್ಠ ವೃತ್ತಿ ಬೇರೊಂದಿಲ್ಲ. ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಎ.ಕೆ. ಯಲ್ಲಪ್ಪ ಹೇಳಿದರು. 

ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್  ಭವನದಲ್ಲಿ ಭಾನುವಾರ  ಆದಿಜಾಂಬವ ಸಾಂಸ್ಕೃತಿಕ  ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ  ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ಶತ ಶತಮಾನಗಳಿಂದಲೂ ದಲಿತರ ಮೇಲೆ ನಡೆದು ಕೊಂಡು ಬಂದಿದೆ. ಶಿಕ್ಷಣ ಕ್ಷೇತ್ರ ಸೇರಿದಂತೆ, ಪ್ರತಿಯೊಂದು ಕ್ಷೇತ್ರಗಳಲ್ಲೂ ಜಾತಿ ವ್ಯವಸ್ಥೆ ಇನ್ನು ಜೀವಂತವಾಗಿದೆ ಎಂದು ವಿಷಾದಿಸಿದರು. 

ಡಾ. ಬಿ.ಆರ್. ಅಂಬೇಡ್ಕರ್  ಬಾಲ್ಯದ  ಜೀವನದಿಂದ  ಮರಣದವರೆಗೂ ಮಡಿಲಲ್ಲಿ ಬೆಂಕಿಯನ್ನು ಕಟ್ಟಿಕೊಂಡು ಹೋರಾಟ ನಡೆಸಿ, ಸಂವಿಧಾನ ಬರೆಯುವ ಮೂಲಕ ಎಲ್ಲಾ ಜಾತಿ, ಜನಾಂಗಕ್ಕೂ ಸ್ವಾತಂತ್ರ್ಯ, ಸಮಾನತೆ, ಮೀಸಲಾತಿಯನ್ನು ಕೊಟ್ಟಂತಹ ಮಹಾನ್ ತ್ಯಾಗಿ. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು. 

ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ  ಕೃಷ್ಣಪ್ಪ, ಪ್ರಭು, ಎ.ಕೆ. ಯಲ್ಲಪ್ಪ, ಸೋಮಣ್ಣ, ನಿಂಗಪ್ಪ, ವೀರಭದ್ರಪ್ಪ ಅವರುಗಳನ್ನು ಸನ್ಮಾನಿಸಲಾಯಿತು. 

ಸಂಘದ ಕಾರ್ಯದರ್ಶಿ ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಪ್ರಧಾನ ಕಾರ್ಯದರ್ಶಿ ಎಂ. ಪ್ರಕಾಶ್, ಸಹ ಕಾರ್ಯದರ್ಶಿ ಬಿ.ಎಂ. ಹನುಮಂತೇಶ್, ಪ್ರಾ.ಶಾ. ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ರಾಜ್‍ಕೋಟಿ, ಎನ್‍ಜಿಒ ಸದಸ್ಯ ಉಮೇಶ್, ನಾಮ ನಿರ್ದೇಶಿತ ಸದಸ್ಯ ಆನಂದಪ್ಪ, ಶಿಕ್ಷಕಿಯರಾದ ಇಂದ್ರಮ್ಮ, ದುರುಗಮ್ಮ, ಮಂಜಮ್ಮ ಇನ್ನಿತರರಿದ್ದರು.

error: Content is protected !!