ಹಿಂಜಾವೇ-ಎಬಿವಿಪಿಯಿಂದ ಕಾರ್ಗಿಲ್ ವಿಜಯೋತ್ಸವ

ದಾವಣಗೆರೆ, ಜು.26- ಹಿಂದೂ ಜಾಗರಣ ವೇದಿಕೆ, ಎಬಿವಿಪಿ ಸಹಯೋಗದಲ್ಲಿ‌ ನಗರದಲ್ಲಿ ಇಂದು ಸಂಜೆ‌ ಕಾರ್ಗಿಲ್ ವಿಜಯೋತ್ಸವದ 22ನೇ ವರ್ಷಾಚರಣೆ ಪ್ರಯುಕ್ತ ದೇಶ ರಕ್ಷಣೆಗೆ ತಮ್ಮ ಪ್ರಾಣಾರ್ಪಣೆ ಮಾಡಿದ ಹುತಾತ್ಮ ವೀರ ಯೋಧರ ಸ್ಮರಿಸಲಾಯಿತು.

ಜಯದೇವ ವೃತ್ತದಲ್ಲಿ ಮೇಣದ ಬತ್ತಿಗಳ ಬೆಳಕು ಮೂಡಿಸಿ, ಮಹಾತ್ಮ ಗಾಂಧಿ ವೃತ್ತದಿಂದ ಜಯದೇವ ವೃತ್ತದವರೆಗೆ ಜಾಥಾ ನಡೆಸಿ, ಅಲ್ಲಿನ ಅಮರ್ ಜವಾನ್ ಸ್ಮಾರಕ ಪ್ರತಿರೂಪದ ಬಳಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಹುತಾತ್ಮರಿಗೆ ಮೌನಾಚರಣೆ ಮಾಡಿ, ಹುತಾತ್ಮ ವೀರ ಯೋಧರ ಸಾಹಸವನ್ನು ನೆನೆಯಲಾಯಿತು.

ಈ ವೇಳೆ ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಭಾರತೀಯರು ಯಾರ ಮೇಲೂ ದಾಳಿ ಮಾಡಿಲ್ಲ. ಆದರೆ ದಾಳಿಕೋರರನ್ನು ಸುಮ್ಮನೆ ಬಿಟ್ಟಿಲ್ಲ. ಕಾರ್ಗಿಲ್ ಯುದ್ಧದ ಸಂದರ್ಭಕ್ಕೂ ಇದು ಅನ್ವಯವಾಗಿದೆ ಎಂದು ತಿಳಿಸಿದರು.

ಯುದ್ಧದಲ್ಲಿ ಬೆಟಾಲಿಯನ್ ಅಧಿಕಾರಿಯಾಗಿ ಸೈನಿಕರಿಗೆ ಹುರಿದುಂಬಿಸಿದ್ದ ದಿ. ಕರ್ನಲ್ ಎಂ.ಬಿ. ರವೀಂದ್ರನಾಥ್ ಅವರ ಹೆಸರನ್ನು ನಿಜಲಿಂಗಪ್ಪ ಬಡಾವಣೆಯ ವೃತ್ತಕ್ಕೆ ಶೀಘ್ರವೇ ನಾಮಕರಣ ಮಾಡಲಾಗುವುದೆಂದರು.  

ಹಿಂಜಾವೇ ಜಿಲ್ಲಾಧ್ಯಕ್ಷ ಮಂಜಾನಾಯ್ಕ ಮಾತನಾಡಿ, ಕಾರ್ಗಿಲ್ ವೀರ ಯೋಧರಂತೆ ದೇಶ ಭಕ್ತಿಯು ಯುವ ಪೀಳಿಗೆಯಲ್ಲಿ ಅರಳಬೇಕಿದೆ ಎಂದು ಆಶಿಸಿದರು. 

ಹಿಂಜಾವೇ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ 529 ಯೋಧರು ಹುತಾತ್ಮರಾಗಿದ್ದಾರೆ. ಸಾವಿರದಷ್ಟು ಸೈನಿಕರು ವಿಕಲಾಂಗರಾದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಗಡಿ ಭದ್ರತಾ ಪಡೆ ಯೋಧರನ್ನು ಸ್ಮರಿಸಲು ಈ ವಿಜಯದ ದಿನವನ್ನು ಆಚರಿಸಬೇಕು ಎಂದರು. 

ಈ ಸಂದರ್ಭದಲ್ಲಿ ಪ್ರಾಂತ ಅಧ್ಯಕ್ಷ ಜಯಕುಮಾರ್, ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ್, ವಿಶ್ವನಾಥ್, ಕಲ್ಲೇಶ್, ನವೀನ್, ವಿನಾಯಕ ರಾನಡೆ, ಪ್ರಶಾಂತ್, ಎಸ್. ಚೇತನ್, ನಿರಂಜನ್, ಪವನ್, ಬಿ. ರಾಕೇಶ್, ಹರೀಶ್, ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಶರತ್ ಸೇರಿದಂತೆ, ಇತರರು ಇದ್ದರು.

error: Content is protected !!