ಹರಿಹರ, ಜು.24- ಹರಿಹರ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಇರುವ ರೈತರ ಜಮೀನಿಗೆ ಹೆಚ್ಚು ನೀರು ನುಗ್ಗಿ ಬೆಳೆಗಳಿಗೆ ಮತ್ತು ಹಲವಾರು ಗ್ರಾಮದಲ್ಲಿ ಮನೆಗಳು ಬಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿರುವ ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಸ್.ರಾಮಪ್ಪ ಅವರು ಗ್ರಾಮಗಳಿಗೆ ಭೇಟಿ ನೀಡಿ, ನೊಂದ ಕುಟುಂಬಕ್ಕೆ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕದೇ ತುಮಕೂರು ನಗರದಲ್ಲಿ ತಮ್ಮ ಪಕ್ಷದ ಐದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಗೆ ಹೋಗಿದ್ದರಿಂದ ತಾಲ್ಲೂಕಿನ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯಿಂದಾಗಿ ಬಡವರು, ರೈತರು, ಕಾರ್ಮಿಕರು ಸೇರಿದಂತೆ ಹಲವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಹೆಚ್ಚು ಆಗುತ್ತಿರುವ ಕಾರಣ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಮನೆಗಳು ನೆಲಕ್ಕೆ ಉರುಳಿವೆ ಮತ್ತು ಜಮೀನಿಗೆ ನೀರು ನುಗ್ಗಿದ್ದರಿಂದ ಈರುಳ್ಳಿ, ಬೆಳ್ಳುಳ್ಳಿ, ಮೆಕ್ಕೆಜೋಳ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ನಗರ ಪ್ರದೇಶಗಳಲ್ಲಿ ಹಲವಾರು ಬಡಾವಣೆಯ ನದಿ ದಂಡೆ ಮೇಲೆ ವಾಸಿಸುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಅವರನ್ನು ಎಪಿಎಂಸಿ ಆವರಣದ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ.
ರೈತರು, ಕಾರ್ಮಿಕರು ಮತ್ತು ನಗರದಲ್ಲಿ ನದಿ ದಂಡೆಯ ಮೇಲೆ ವಾಸಿಸುವ ಗಂಗಾನಗರ, ಹಳ್ಳದಕೇರಿ, ತೆಗ್ಗಿನಕೇರಿ ಸೇರಿದಂತೆ ಇತರೆ ಬಡಾವಣೆಯ ಜನರು ಶಾಸಕ ಎಸ್.ರಾಮಪ್ಪನವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.