ಉಕ್ಕಡಗಾತ್ರಿ ಸುತ್ತುವರಿದ ನೀರು ತುಮ್ಮಿನಕಟ್ಟೆ ರಸ್ತೆಯೂ ಬಂದ್
ಮಲೇಬೆನ್ನೂರು, ಜು.24- ಶನಿವಾರ ದಾವಣಗೆರೆ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದರೂ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮತ್ತೆ ಕೆಲವು ಸಂಪರ್ಕ ರಸ್ತೆಗಳು, ತೋಟ, ಗದ್ದೆಗಳು ನದಿ ಹಿನ್ನೀರಿನಲ್ಲಿ ಮುಳುಗಿವೆ.
ತುಂಗಾ ಜಲಾಶಯಕ್ಕೆ ಶನಿವಾರ ಬೆಳಿಗ್ಗೆ 87 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, ಒಳಬರುವ ಎಲ್ಲಾ ನೀರನ್ನು ನದಿಗೆ ಬಿಟ್ಟಿರುವ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಶುಕ್ರವಾರಕ್ಕಿಂತ ಇಂದು ಹೆಚ್ಚಾಗಿತ್ತು.
ಸುಕ್ಷೇತ್ರ ಉಕ್ಕಡಗಾತ್ರಿಯ ಸುತ್ತಲು ತುಂಗಭದ್ರಾ ನದಿ ನೀರು ಆವರಿಸಿಕೊಂಡಿದ್ದು, ಇಂದು ಉಕ್ಕಡಗಾತ್ರಿ-ತುಮ್ಮಿನಕಟ್ಟೆ ಸಂಪರ್ಕ ಸೇತುವೆಯೂ ನದಿ ಹಿನ್ನೀರಿನಲ್ಲಿ ಮುಳುಗಡೆ ಯಾಗಿದ್ದು, ವಾಹನಗಳ ಸಂಪರ್ಕ ಕಡಿತಗೊಂಡಿದೆ. ನದಿ ನೀರು ಅಜ್ಜಯ್ಯನ ದೇವಸ್ಥಾನದ ಕೆಳಗಡೆ ಮತ್ತಷ್ಟು ನುಗ್ಗಿ ಬಂದಿದೆ. ಉಕ್ಕಡಗಾತ್ರಿಗೆ ಬರುವವರು ಕೋಟೆಹಾಳ್-ನಿಟುವಳ್ಳಿ ಮಾರ್ಗವಾಗಿ ಬರಬಹುದೆಂದು ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ಬಿಳಸನೂರು ಬಳಿ ನದಿ ನೀರು ರಾಜನಹಳ್ಳಿ ರಸ್ತೆಯವರೆಗೂ ಬಂದಿದ್ದು, ಜಮೀನುಗಳಲ್ಲಿ ನೀರು ನಿಂತು ಹೊಳೆಯಂತಾಗಿದೆ.
ಹಳ್ಳ-ಕೊಳ್ಳಗಳಿಂದ ನೀರು ಹರಿದು ಬರುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದು ಹೇಳಲಾಗಿದೆ.
ಭದ್ರಾ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಸಂಜೆ ಇಳಿಮುಖವಾಗಿದೆ. ಶನಿವಾರ ಬೆಳಿಗ್ಗೆ 50,195 ಕ್ಯೂಸೆಕ್ಸ್ ಇದ್ದ ಒಳಹರಿವು ಸಂಜೆ 22 ಸಾವಿರ ಕ್ಯೂಸೆಕ್ಸ್ಗೆ ಇಳಿಕೆ ಕಂಡಿದೆ ಎಂದು ಜಲಾಶಯದ ಇಂಜಿನಿಯರ್ ತಿಳಿಸಿದ್ದಾರೆ.
ಮಳೆ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ನೀರಿನ ಒಳಹರಿವು ಸಹ ಕಡಿಮೆ ಆಗಲು ಕಾರಣವಾಗಿದೆ. ಜಲಾಶಯದ ನೀರಿನ ಮಟ್ಟ ಸಂಜೆ ವೇಳೆಗೆ 176 ಅಡಿ 2 ಇಂಚು ಆಗಿತ್ತು.
ಜಯಾಶಯ ಭರ್ತಿ 10 ಅಡಿ ಮಾತ್ರ ಬಾಕಿ ಇದೆ.
ಹರಿಹರ ತಾ.ನಲ್ಲಿ 28 ಮನೆಗಳಿಗೆ ಹಾನಿ : ಬುಧವಾರ, ಗುರುವಾರ, ಶುಕ್ರವಾರ ಸುರಿದ ಮಳೆಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ 28 ವಾಸದ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಮಲೇಬೆನ್ನೂರು ಹೋಬಳಿಯ 16 ಗ್ರಾಮಗಳಲ್ಲಿ 18 ಮನೆಗಳಿಗೆ ಹಾನಿಯಾಗಿದ್ದು, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಉಪತಹಶೀಲ್ದಾರ್ ಆರ್. ರವಿ ಮಾಹಿತಿ ನೀಡಿದರು.
ತುಂಗಭದ್ರಾ ನದಿ ಪಾತ್ರದಲ್ಲಿರುವ ಗದ್ದೆ, ತೋಟಗಳು ನದಿ ಹಿನ್ನೀರಿನಲ್ಲಿ ಮುಳುಗಿವೆ ಎಂದು ರೈತರು ತಿಳಿಸಿದ್ದಾರೆ.