ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭರವಸೆ
ಹೊನ್ನಾಳಿ, ಜು. 24- ಕಳೆದ ಹತ್ತಾರು ವರ್ಷಗಳಿಂದ ತುಂಗಭದ್ರಾ ನದಿ ದಂಡೆಯ ಮೇಲಿರುವ ಬಾಲರಾಜ್‍ಘಾಟ್ ಪ್ರದೇಶ ಪ್ರತಿಬಾರಿ ಅತಿವೃಷ್ಟಿಯಾದಾಗ ವಾಸದ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಈ ಭಾಗದ ನಿವಾಸಿಗಳನ್ನು ಬೇರಡೆಗೆ ಸ್ಥಳಾಂತರಿಸಿ ನಿವೇಶನ ನೀಡಲಾಗುವುದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ತಾಲ್ಲೂಕು ಆಡಳಿತದೊಂದಿಗೆ ಪ್ರವಾಹ ಪೀಡಿತ ಪ್ರದೇಶವಾದ ಪಟ್ಟಣದ ಬಾಲರಾಜ್‍ಘಾಟ್ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಜೊತೆಗೆ ತುಂಗ ಭದ್ರಾ ನದಿ ಪ್ರವಾಹದ ನೀರನ್ನು ಶಾಶ್ವತವಾಗಿ ತಡೆಯಲು ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಲು 350 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಬಾಲರಾಜ್ ಘಾಟ್ ಪ್ರದೇಶದಲ್ಲಿನ ನಿವಾಸಿಗಳಿಗೆ ತಾಲ್ಲೂಕಿನ ಮಲ್ಲದೇವರ ಕಟ್ಟೆ ಬಳಿ ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡಲಾಗುವುದು. ಆದರೆ ಬಾಲರಾಜ್ ಘಾಟ್ ಪ್ರದೇಶದಲ್ಲಿನ ಕೆಲವು ನಿವಾಸಿಗಳು ತುಂಗಭದ್ರಾ ಬಡಾವಣೆಯಲ್ಲಿ ಮನೆಗಳನ್ನು ಹೊಂದಿದ್ದರೂ ಅವುಗಳನ್ನು ಬಾಡಿಗೆ ನೀಡಿ ಪ್ರವಾಹ ಬರುವ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ತಹಶೀಲ್ದಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಸರ್ವೇ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಸೂಚನೆ ನೀಡಿದರು.
ಈ ರೀತಿ ಪಟ್ಟಯಲ್ಲಿನ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ನಿವೇಶನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರವಾಹ ಪೀಡಿತ ಪ್ರದೇಶದ ಜನರು ಆಶ್ರಯ ಪಡೆದಿರುವ ಸಮೀಪದ ಅಂಬೇಡ್ಕರ್ ಭವನದ ಕಾಳಜಿ ಕೇಂದ್ರಕ್ಕೆ ತೆರಳಿ ಅಲ್ಲಿರುವ 32 ಕುಟುಂಬಗಳ ಸುಮಾರು 112 ಜನರನ್ನು ಭೇಟಿ ಮಾಡಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು
ಜಿಲ್ಲಾಧಿಕಾರಿಗಳು ಮಾತನಾಡಿ, ಈ ಭಾಗದ ನಿವಾಸಿಗಳ ಬಗ್ಗೆ ಸರ್ವೆ ಮಾಡಿಸಿ ನಂತರ ನೈಜ್ಯ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನ್ಯಾಮತಿ ತಾಲ್ಲೂಕಿನಲ್ಲಿ ಮಳೆಯಿಂದ ಕೋಡಿ ಬಿದ್ದಿರುವ ಬೆಳಗುತ್ತಿಯ ಹಿರೇಕೆರೆ, ಕುಳೇಹಳ್ಳಿ ಕೆರೆ, ಹೊಸಕೊಪ್ಪದ ಬಳಿಯ ನೆರಗಿನ ಕೆರೆ, ಸವಳಂಗ ಕೆರೆ ಹೊಸ ಮತ್ತು ಹಳೆ ಜೋಗದ ಕೆರೆಗಳು ಹಾಗೂ ಜಮೀನುಗಳ ಪರಿಸ್ಥಿತಿಗಳನ್ನು ಅವಲೋಕಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸನಗೌಡ ಕೋಟೂರ, ಪುರಸಭೆ ಮುಖ್ಯಾಧಿಕಾರಿ ಪಂಪಾಪತಿನಾಯ್ಕ, ಪುರಸಭೆ ಸದಸ್ಯ ಬಾಬ ಹೋಬಳದಾರ್, ಮುಖಂಡರಾದ ಸರಳಿನ ಮನೆ ಮಂಜು, ವಡ್ಡಿ ಚನ್ನಪ್ಪ, ಸತೀಶ್,ಇಂಚರ ಮಂಜು, ಸಿ.ಡಿ.ಪಿ.ಒ ಮಹಾಂತೇಶ್ ಸ್ವಾಮಿ ಪೂಜಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಬಂತಿ, ಪಿ.ಎಸ್.ಐ ಬಸನಗೌಡ ಬಿರಾದಾರ್ ಮತ್ತಿತರರಿದ್ದರು.