ನ್ಯಾಮತಿ, ಮೇ 7- ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಕೆಮ್ಮು, ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಗ್ರಾಮದಲ್ಲಿ ಮೊಕ್ಕಾಂ ಹೂಡಿ ಗ್ರಾಮಸ್ಥರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು 26 ಜನರಿಗೆ ಕೊರೊನಾ ಸೋಂಕು ಇಂದು ಪತ್ತೆಯಾಗಿದೆ.
ಗುರುವಾರ ಸಂಜೆ ಗ್ರಾಮದಲ್ಲಿ ಕೆಮ್ಮು, ನೆಗಡಿ ಹೆಚ್ಚಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಶಾಸಕರು, ಅಧಿಕಾರಿಗಳಿಗೆ ಗ್ರಾಮದ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿ ಬಂದಿದ್ದರು. ಶುಕ್ರವಾರ ಬೆಳಗ್ಗೆಯಿಂದ ಅಧಿಕಾರಿಗಳ ತಂಡ ಗ್ರಾಮದಲ್ಲಿ ಬೀಡು ಬಿಟ್ಟಿದ್ದು 248 ಜನರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು ಅದರಲ್ಲಿ 26 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಕೊರೊನಾ ಸೋಂಕಿತರಲ್ಲಿ ಕೆಲವರನ್ನು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದು, ಮತ್ತೆ ಕೆಲವರನ್ನು ಮಾದನಬಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ
ದಾಖಲು ಮಾಡಿದ್ದು ಇನ್ನು ಕೆಲವರನ್ನು ಹೋಂ ಐಸೋಲೇಷನ್ ಮಾಡಲಾಗಿದೆ.
ಗ್ರಾಮದ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿದ ಶಾಸಕರು, ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಅಧಿಕಾರಿಗಳು ಗ್ರಾಮದಲ್ಲೇ ಬೀಡು ಬಿಟ್ಟು ಇನ್ನೂ ಎರಡು ದಿನ ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದಲ್ಲಿ ಇನ್ನೂ 1,400 ಜನರ ಕೋವಿಡ್ ಪರೀಕ್ಷೆ ಮಾಡಿಸಿದ್ದು ಅವರ ವರದಿ ಬರುವುದು ಬಾಕಿ ಇದ್ದು, ಸೋಂಕಿನ ಪ್ರಮಾಣ ಹೆಚ್ಚಾಗಬಹುದೆಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು.