ಹರಿಹರದ ಅತಿವೃಷ್ಟಿ ಪ್ರದೇಶಗಳಿಗೆ ಶಾಸಕ ರಾಮಪ್ಪ ಭೇಟಿ
ಹರಿಹರ, ಜು. 25- ಇಲ್ಲಿನ ಬೆಂಕಿನಗರದ ಬಡಾವಣೆಯಲ್ಲಿ ಹರಿಯುವ ಡಿ.ಬಿ. ಕೆರೆ ಚಾನಲ್‌ಗೆ ತಡೆ ಗೋಡೆ ನಿರ್ಮಾಣದ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಎಸ್. ರಾಮಪ್ಪ ತಿಳಿಸಿದ್ದಾರೆ.
ಗಂಗಾನಗರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಹಾಗೂ ಬೆಂಕಿನಗರದ ಬಡಾವಣೆಯಲ್ಲಿ ಡಿ.ಬಿ. ಕೆರೆ ಚಾನಲ್ ನೀರು ಹೆಚ್ಚಾಗಿ ಹರಿದು ಬೆಂಕಿನಗರದ ನಿವಾಸಿಗಳಿಗೆ ತೊಂದರೆಯಾಗಿರುವುದರಿಂದ ಈ ಬಡಾವಣೆಗೆ ಇಂದು ಭೇಟಿ ನೀಡಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಬೆಂಕಿನಗರದ ನಿವಾಸಿಗಳ ಸಮಸ್ಯೆ ಪರಿಹರಿಸಲು ಕಳೆದ ಆರು ತಿಂಗಳ ಕೆಳಗೆ 25 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡಿ ಕಾಮಗಾರಿ ಮಾಡಲು ಭೂಮಿ ಪೂಜೆ ಮಾಡಲಾಗಿತ್ತು. ಆದರೆ, ನಿಗದಿತ ವೆಚ್ಚದಲ್ಲಿ ಕಾಮಗಾರಿ ಅಸಾಧ್ಯವಾದ ಕಾರಣ ಇನ್ನಷ್ಟು ಹಣ ವಿನಿಯೋಗಿಸಿ ಪೂರ್ಣ ಕಾಮಗಾರಿ ನಡೆಸಲು ಉದ್ದೇಶಿಸಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು ಎಂದರು.
ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡದೇ ಇರುವು ದರಿಂದ ಇದೀಗ 25 ಲಕ್ಷ ರೂ ವೆಚ್ಚದಲ್ಲಿಯೇ 5 ಅಡಿ ಎತ್ತರದ ತಡೆ ಗೋಡೆ ನಿರ್ಮಾಣ ಕಾಮಗಾರಿ ಅತಿ ಶೀಘ್ರದಲ್ಲಿ ಆರಂಭಿಸಲು ಹಾಗೂ ಬಡಾವಣೆಯ ಕೆಲವು ರಸ್ತೆಗಳಿಗೆ ಗ್ರಾವೆಲ್ ಹಾಕಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಎಪಿಎಂಸಿ ಆವರಣದಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿದ್ದ 56 ನಿರಾಶ್ರಿತರ ಕುಟುಂಬಗಳ ಯೋಗಕ್ಷೇಮ ವಿಚಾರಿಸಿದರು. ಗಂಗಾನಗರದ ನಿವಾಸಿಗಳಿಗೆ ಮನೆಗಳ ನಿರ್ಮಾಣ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ವಸತಿ ಸಚಿವ ವಿ.ಸೋಮಣ್ಣ ನವರನ್ನು ಭೇಟಿ ಮಾಡುವುದಾಗಿ ಹೇಳಿದರು.
ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ, ಎಇಇ ಬಿರಾದಾರ, ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ಮುಖಂಡ ದಾದಾಪೀರ್ ಭಾನುವಳ್ಳಿ, ಅಭಿದಾಲಿ ಮಲೇಬೆನ್ನೂರು, ಗ್ರೇಡ್2 ತಹಶೀಲ್ದಾರ್ ಶಶಿಧರ್, ಹೇಮಂತ್, ಆನಂದ್, ಕಾಳಿ ಪ್ರಸಾದ್, ನಜೀರ್ ಹುಸೇನ್ ಇತರರು ಹಾಜರಿದ್ದರು.