ಸಮಾವೇಶದಲ್ಲಿ ನಾಯಕರ ವಿರುದ್ಧ ಘೋಷಣೆ

ಸಮಾವೇಶದಲ್ಲಿ ನಾಯಕರ ವಿರುದ್ಧ ಘೋಷಣೆ - Janathavaniಡಾ. ಎ.ಹೆಚ್.ಶಿವಯೋಗಿ ಸ್ವಾಮಿ ವ್ಯಾಕುಲತೆ

ದಾವಣಗೆರೆ, ಜು.25 – ಬೆಂಗಳೂರಿನಲ್ಲಿ ಇಂದು ನಡೆದ ಮಠಾಧೀಶರ ಸಮಾವೇಶದಲ್ಲಿ ನಡೆದ ಈ ಘಟನೆ ಅನುಚಿತವಾದದ್ದು. ಬಿಜೆಪಿ ರಾಷ್ಟ್ರೀಯ ನಾಯಕರ, ಕೇಂದ್ರ ಸಚಿವರ ಬಗ್ಗೆ ಅನಗತ್ಯವಾಗಿ ವಿರೋಧಿ ಘೋಷಣೆ ಕೂಗಿರುವುದು ಬಿಜೆಪಿ ಮತ್ತು ಕಾರ್ಯಕರ್ತರಿಗೆ ಮಾಡಿದ ಅಗೌರವವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸಂಘಟನೆಗೆ ತಮ್ಮ ಜೀವನವನ್ನೇ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ರಾಗಿ ಸಾಮಾಜಿಕ ಕಾರ್ಯಕ್ಕಾಗಿ ದೇಶಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ಅವರ ವೈಯಕ್ತಿಕ ಜೀವನವನ್ನು ಹತ್ತಿರದಿಂದ ನೋಡಿರುವ ಯಾರೂ ಕೂಡ ಅವರ ಬಗ್ಗೆ ಅಗೌರವದಿಂದ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಇಂಜಿನಿಯರಿಂಗ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸ್ ಮಾಡಿ ನಂತರ ಸಮಾಜ ಕಾರ್ಯಕ್ರಮಗಳಿಗೆ ಪೂರ್ಣಾವಧಿ ತಮ್ಮ ಸಮಯವನ್ನು, ಸರ್ವಸ್ವವನ್ನು ಮೀಸಲಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ, ಪ್ರತಿಕ್ಷಣ ನಮ್ಮ ಪಕ್ಷದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಅಹರ್ನಿಶಿ ಚಿಂತಿಸುತ್ತಾ `ದೇಶ ಮೊದಲು’ ಎಂಬ ಘೋಷಣೆಗೆ ಪ್ರತಿ ಬದ್ಧರಾಗಿ, `ಶ್ವೇತ ವಸ್ತ್ರಧಾರಿ ಸಂತ’ನಂತೆ ಜೀವನ ಸಾಗಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ನಾಯಕ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ವಿಶ್ವಾಸಕ್ಕೆ, ನಂಬಿಕೆಗೆ ಪಾತ್ರರಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನು ಕಿಂಚಿತ್ತು ಕುಂದು ಬರದಂತೆ ನಿರ್ವಹಿಸುತ್ತಿರುವ ಸಂತೋಷ್ ಅವರ ಬಗ್ಗೆ ಹಾಗೂ ಕೇಂದ್ರದಲ್ಲಿ ಬಹುಮುಖ್ಯ ಖಾತೆಯನ್ನು ನಿರ್ವಹಿಸುತ್ತಾ ಇದ್ದರೂ ಸಹ ಭ್ರಷ್ಟಾಚಾರದ ಆರೋಪಕ್ಕೆ ಸ್ವಲ್ಪವೂ
ಅವಕಾಶ ನೀಡದೆ ಅತ್ಯಂತ ದಕ್ಷತೆಯಿಂದ ತಮ್ಮ ಖಾತೆಯನ್ನು ನಿರ್ವಹಿಸುತ್ತಾ ಇರುವ ಪ್ರಹ್ಲಾದ್‍ ಜೋಶಿಯವರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಯೋಚನೆಗಳನ್ನು ತಿಳಿಸಲು ಮುಕ್ತ ಅವಕಾಶ ಇರುತ್ತದೆ. ಆದರೆ ಅದರ ಅರ್ಥ ತಮ್ಮ ಸ್ವಾರ್ಥ ಸಾಧನೆಗೆ, ವೈಯುಕ್ತಿಕ ಹಿತಾಸಕ್ತಿಗೆ, ಸಂತೋಷ್ ವಿರುದ್ಧ, ಪ್ರಹ್ಲಾದ್ ಜೋಶಿ ಯವರ  ವಿರುದ್ಧ ಘೋಷಣೆ ಕೂಗುವುದು ಯಾವುದೇ ಪ್ರಜ್ಞಾವಂತ ಸಮಾಜಕ್ಕೆ ಗೌರವ  ತರುವಂತಹದ್ದಲ್ಲ. ನಾಡಿನ ಹಿರಿಯ ಮಠಾಧೀಶರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ರೀತಿ ಕೆಲವು ಕಿಡಿಗೇಡಿಗಳು ಮಾಡಿರುವ ಕಾರ್ಯ ಸಭೆಯ ಆಯೋಜನೆ ಮಾಡಿದ, ಭಾಗವಹಿಸಿದ ಎಲ್ಲ ಪೂಜ್ಯರಿಗೆ ಮಾಡಿದ ಅಗೌರವವಾಗಿರುತ್ತದೆ. 

ಪೂರ್ವಾಗ್ರಹ ಪೀಡಿತರಾಗಿ ನಡೆದುಕೊಳ್ಳು ವುದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಪರಮಪೂಜ್ಯ ಶ್ರೀಗಳವರು ಇಂತಹ ಘಟನೆಗೆ ಕಾರಣರಾದವರಿಗೆ, ಸಮಾಜದಲ್ಲಿ ಸಾಮರಸ್ಯ ಕದಡುವ ವ್ಯಕ್ತಿಗಳಿಗೆ, ಅವರಿಗೆ ಕುಮ್ಮಕ್ಕು ನೀಡುವ ಶಕ್ತಿಗಳಿಗೆ, ಸೂಕ್ತ ಬುದ್ಧಿ ಮಾತು ಹೇಳಿ ಮಾರ್ಗ ದರ್ಶನ ಮಾಡಬೇಕಾಗಿ ಶಿವಯೋಗಿಸ್ವಾಮಿ  ವಿನಂತಿಸಿದ್ದಾರೆೆ.

error: Content is protected !!