ದಾವಣಗೆರೆ, ಮೇ 6- ಮಂಗಳವಾರ ಸುರಿದ ಮಳೆ ಗಾಳಿಗೆ ಹಾನಿಯಾಗಿರುವ ತೋಟಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ಒತ್ತಾಯಿಸಿದರು.
ಹೋಬಳಿಯ ಅಣಬೇರು ಮತ್ತು ಬಾಡ ಗ್ರಾಮಗಳಲ್ಲಿ ಮಳೆಗೆ ಹಾನಿಯಾದ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಲಾಕ್ಡೌನ್ನಿಂದ ಬೆಳೆಗಳಿಗೆ ಬೆಲೆ ಇಲ್ಲದೆ ಕಂಗಾಲಾದ ರೈತರಿಗೆ ಅತಿವೃಷ್ಟಿಯಿಂದ ತೋಟ ಹಾಳಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಅತಿವೃಷ್ಟಿಯಿಂದ ಅಡಿಕೆ, ತೆಂಗಿನ ತೋಟ ಕಳೆದು ಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಅಣಬೇರಿನಲ್ಲಿ ಮಳೆಯಿಂದ ನೆಲಕ್ಕುರುಳಿದ ಅಡಿಕೆ ತೋಟಗಳನ್ನು ಮತ್ತು ನೀರು ಹರಿದು ಹಾಳಾದ ಭತ್ತದ ಗದ್ದೆಗಳನ್ನು ಪರಿಶೀಲಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ರುದ್ರಪ್ಪ, ಸದಸ್ಯರಾದ ಅನಿಲ್ ಕುಮಾರ್, ಮಾದಪ್ಪ, ಮುಖಂಡರಾದ ಜಾಫರ್ ಷರೀಫ್, ಮಾಳಿಗೇರ ಶಿವಜ್ಜ, ಚಿಗಟೇರಪ್ಪರ ಪ್ರಭಣ್ಣ, ಕುಳೇನೂರು ರೇವಣ್ಣ, ರೇವಣಸಿದ್ದಪ್ಪ, ಮಾಳಿಗೇರ ರೇವಣ್ಣ, ಚಂದ್ರಪ್ಪ ಮತ್ತಿತರರು ಇದ್ದರು.