ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ `ಎ’ ಗ್ರೇಡ್ ಮಾನ್ಯತೆ : ಸಂಸದ ದೇವೇಂದ್ರಪ್ಪ

ಕೊಟ್ಟೂರು, ಮಾ.5- ರಾಜ್ಯದ ಗ್ರಾಮೀಣ ಭಾಗದ ಮೊದಲ ನ್ಯಾಕ್ ಸಮಿತಿಯಿಂದ ಎ-ಗ್ರೇಡ್‍ ಮಾನ್ಯತೆ ಪಡೆದ ಏಕೈಕ ಶಿಕ್ಷಣ ಮಹಾವಿದ್ಯಾಲಯ ಕೊಟ್ಟೂರೇಶ್ವರ ಮಹಾವಿದ್ಯಾಲಯವಾಗಿದ್ದು, ಇಂತಹ ಮಹಾವಿದ್ಯಾಲಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಕಲಿಕೆಯ ಲಾಭ ಪಡೆದು ಉತ್ತಮ ಬದುಕನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಿ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಕರೆ ನೀಡಿದರು. 

ಕೊಟ್ಟೂರೇಶ್ವರ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರಸಕ್ತ ವರ್ಷದ ವಿವಿಧ ಶೈಕ್ಷಣಿಕ ಸಂಘಗಳ ಕಾರ್ಯಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಸಂಸದರು ಮಾತನಾಡಿದರು. 

ಜಿಲ್ಲೆಯಲ್ಲಿನ ಶೈಕ್ಷಣಿಕ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಲೆಂದೇ ಗಣ್ಯರನೇಕರು ವೀ.ವಿ.ಸಂಘವನ್ನು ಸ್ಥಾಪಿಸಿ ಇದರ ಮೂಲಕ ಕೊಟ್ಟೂರೇಶ್ವರ ಮಹಾವಿದ್ಯಾಲಯವನ್ನು 1967 ರಲ್ಲಿ ಪ್ರಾರಂಭಿಸಿದರು. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳೇ ಉತ್ತಮ ಶೈಕ್ಷಣಿಕ ಸಾಧನೆ ತೋರಿ ಹಿರಿಮೆ ಮೆರೆಯುತ್ತಿರುವುದು ಕೊಟ್ಟೂರೇಶ್ವರ ಕಾಲೇಜಿನ ಹೆಮ್ಮೆಯ ವಿಷಯ. ಮಹಾವಿದ್ಯಾಲಯಕ್ಕೆ ಸರ್ಕಾರದಿಂದ ನೆರವು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ವೀ.ವಿ.ಸಂಘದ ಕಾರ್ಯದರ್ಶಿ ಕೊಟ್ರಪ್ಪ ಚೋರನೂರು ಮಾತನಾಡಿದರು. ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಚನ್ನಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಕೆ.ಎಂ. ಮಂಜುನಾಥ ಪ್ರಾಸ್ತಾವಿಕವಾಗಿ  ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ನಾಗನಗೌಡ, ಟಿ.ಎಂ. ಗಿರೀಶ್, ಮಲ್ಲಿಕಾರ್ಜುನ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ  ಜಿ.ಬಿ.ನಾಗನಗೌಡ, ವಾಮದೇವಪ್ಪ ಇತರರು ವೇದಿಕೆ ಯಲ್ಲಿದ್ದರು. ಕುಸುಮ ಸಜ್ಜನ್ ಸ್ವಾಗತಿಸಿದರು.

error: Content is protected !!