ಹರಿಹರ ನಗರಸಭೆ ನೂತನ ಅಧ್ಯಕ್ಷೆ ರತ್ನ ಉಜ್ಜೇಶ್
ಹರಿಹರ, ಮೇ 1- ನಗರಸಭೆಯ ಎಲ್ಲಾ ಸದಸ್ಯರು ಮತ್ತು ಅಧಿಕಾರಿ ವರ್ಗದವರ ಸಹಕಾರದೊಂದಿಗೆ ನಗರದ ಎಲ್ಲಾ ವಾರ್ಡ್ಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ನಗರಸಭೆ ನೂತನ ಅಧ್ಯಕ್ಷರಾದ ಡಿ.ಯು. ರತ್ನ ಉಜ್ಜೇಶ್ ಹೇಳಿದರು.
ಅವರು ನಗರಸಭೆ ಆವರಣದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕೊರೊನಾ ನಿಯಂತ್ರಣ ಹಾಗೂ ನಗರದ ಅಭಿವೃದ್ಧಿ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ನಗರಕ್ಕೆ ಪೂರಕವಾದ ಅಭಿವೃದ್ಧಿ ಕೆಲಸ, ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ನಗರದಲ್ಲಿನ ಪ್ರತಿಯೊಂದು ಬಡಾವಣೆಗೆ ವಿದ್ಯುತ್, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಪಾರ್ಕ್ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ನಾಳೆ ಯಿಂದ ನಗರಸಭೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೆ ವಾರ್ಡ್ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್. ಲಕ್ಷ್ಮಿ, ನಗರಸಭೆ ಎಇಇ ಬಿರಾದಾರ, ಉಪಾಧ್ಯಕ್ಷ ಎಂ. ಬಾಬುಲಾಲ್, ನಗರಸಭೆ ಸದಸ್ಯರಾದ ಎ. ವಾಮನಮೂರ್ತಿ, ಶಂಕರ್ ಖಟಾವ್ಕರ್, ಪಿ.ಎನ್. ವಿರೂಪಾಕ್ಷ, ನಿಂಬಕ್ಕ ಚಂದಾಪೂರ್, ಉಷಾ ಮಂಜು ನಾಥ್, ಅಶ್ವಿನಿ ಕೆ.ಜಿ. ಕೃಷ್ಣ, ನಾಗರತ್ನ, ಕೆ.ಜಿ. ಸಿದ್ದೇಶ್, ಲಕ್ಷ್ಮೀ ಮೋಹನ್ ದುರಗೋಜಿ, ಮಹಬೂಬ್ ಬಾಷಾ, ದಾದಾ ಖಲಂದರ್, ಮುಖಂಡರಾದ ಸುರೇಶ್ ಚಂದಾಪೂರ್, ಅಮರಾವತಿ ನಾಗರಾಜ್, ಹೆಚ್. ನಿಜಗುಣ, ರಾಜು, ಸಂಗಮೇಶ್, ಆಶೋಕ, ಡಿ. ಸಿದ್ದೇಶ್, ಭಾನುವಳ್ಳಿ ದಾದಾಪೀರ್, ಜಾಕೀರ್ ಇನ್ನಿತರರಿದ್ದರು.