ದಾವಣಗೆರೆ, ಮಾ.4- ರೋಟರಿ ಸಂಸ್ಥೆ ದಾವಣಗೆರೆ ಇವರ ವತಿಯಿಂದ ಇದೇ ದಿನಾಂಕ 6 ಮತ್ತು 7 (ಶನಿವಾರ ಮತ್ತು ಭಾನುವಾರ) ನಗರದ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನೋಟು-ನಾಣ್ಯಗಳ `ಅಪೂರ್ವ ಸಂಗ್ರಹ’ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿಯ ಈರಪ್ಪ ಗುರುಲಿಂಗ ಪರಮಶೆಟ್ಟಿ ಅವರು ಕಳೆದ 5 ದಶಕಗಳಿಂದ ಸಂಗ್ರಹಿಸಿರುವ ಅಪರೂಪದ ನೋಟುಗಳು ಮತ್ತು ನಾಣ್ಯಗಳನ್ನು ಪ್ರದರ್ಶಿಸಲಾಗುವುದು ಎಂದರು.
ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಈ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.
ಬ್ರಿಟಿಷ್ ಆಡಳಿತದ ಮರಾಠಾ, ಪೇಶ್ವೆ, ಮೊಘಲರು, ನಿಜಾಮರು ಹಾಗೂ ಟಿಪ್ಪುಸುಲ್ತಾನ್ ಆಡಳಿತದ ನಾಣ್ಯ ಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ ಎಂದು ಹೇಳಿದರು.
ಒಂದರಿಂದ ಸಾವಿರ ರೂ. ಗಳ ಹಳೆಯ ಬೆಳ್ಳಿಯ ನಾಣ್ಯಗಳು ಮತ್ತು ಒಂದೇ ಮೌಲ್ಯದ ನೂರ ಐವತ್ತಕ್ಕೂ ಹೆಚ್ಚು ವಿವಿಧ ನೋಟುಗಳು ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರು.
ಈರಪ್ಪ ಗುರುಲಿಂಗ ಪರಮಶೆಟ್ಟಿ ಇವರ ಸಂಗ್ರಹ `ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ 1992 ರಿಂದ ಸತತವಾಗಿ ಮೂರು ವರ್ಷಗಳ ಕಾಲ ನಮೂದಿಸಲ್ಪಟ್ಟಿದೆ ಎಂದು ತಿಳಿಸಿದರು.
ಮಾ.6 ರ ಶನಿವಾರ ಬೆಳಿಗ್ಗೆ 11 ಕ್ಕೆ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಡಿಡಿಪಿಐ ಪರಮೇಶ್ವರಪ್ಪ, ತಹಶೀಲ್ದಾರ್ ಗಿರೀಶ್ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಪ್ರದರ್ಶನ ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಅಂದನೂರು ಆನಂದಕುಮಾರ್, ನಿಕಟಪೂರ್ವ ಅಧ್ಯಕ್ಷ ವಿಕಾಸ್‌ಕುಮಾರ್ ಸಂಘವಿ ಉಪಸ್ಥಿತರಿದ್ದರು.