18 ವರ್ಷ ಮೇಲ್ಪಟ್ಟವರಿಗೆ ಇಂದು ಲಸಿಕೆ ಸಿಗದು

ಲಸಿಕೆ ಬಗ್ಗೆ ಮಾಹಿತಿ ನೀಡುವವರೆಗೆ ಆಸ್ಪತ್ರೆಗೆ ಬರದಂತೆ ಜನತೆಯಲ್ಲಿ ಸಚಿವ ಸುಧಾಕರ ಮನವಿ

ಬೆಂಗಳೂರು, ಏ. 30 – ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ  ನಾಳೆ ಶನಿವಾರದಿಂದಲೇ ಲಸಿಕೆ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಬೇಡಿಕೆ ಮತ್ತು ಹಣ ಪಾವತಿಸದಿರುವುದರಿಂದ ನಿಗದಿತ ಸಮಯಕ್ಕೆ ಲಸಿಕೆಗಳು ದೊರೆಯುತ್ತಿಲ್ಲ. 

18 ರಿಂದ 44 ವಯಸ್ಸಿನವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆಗಳನ್ನು ಪೂರೈಸುತ್ತಿಲ್ಲ. ಈ ವರ್ಗಕ್ಕೆ ರಾಜ್ಯ ಸರ್ಕಾರವೇ ಉಚಿತ ಲಸಿಕೆ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಉಚಿತ ಲಸಿಕೆ ಎಂದು ಹೇಳಿದ್ದರು. ಆದರೆ ಉಚಿತ ಲಸಿಕೆ  ವಿಳಂಬವಾಗಲಿದೆ. 

ಇನ್ನು ಲಸಿಕಾ ಕಂಪನಿಗಳು ಲಸಿಕೆಯನ್ನು ನಾಳೆಯಿಂದ ದುಬಾರಿ ದರದಲ್ಲಿ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ಪಾವತಿಸಿ, ಲಸಿಕೆ ಪಡೆದುಕೊಳ್ಳಬಹುದು. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಈಗಿನ ನಿಯಮಾವಳಿಯಂತೆ ಉಚಿತ ಹಾಗೂ ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗಲಿದೆ. 

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಕೋವಿಡ್ ಲಸಿಕೆ ಪಡೆಯಲು ನಾಳೆ ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ  ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು ಎನ್ನುವ ಮೂಲಕ ಸಚಿವರು 18 ವರ್ಷದಿಂದ 44 ವರ್ಷದವರಿಗೆ ನಾಳೆ ಡೋಸ್ ಸಿಗಲ್ಲ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಉಚಿತ ವ್ಯಾಕ್ಸಿನ್ ವಿಚಾರದಲ್ಲಿ ಗೊಂದಲ ಬೇಡ. ಡೋಸ್ ವಿಚಾರದಲ್ಲಿ ಒತ್ತಾಯ, ಒತ್ತಡ ಮಾಡಲು ಸರ್ಕಾರ ಸಿದ್ದವಿದೆ. 18 ವಯಸ್ಸಿನಿಂದ 44 ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಪೂರೈಕೆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲೆ ತಮಗೆ ಮಾಹಿತಿ ನೀಡಲಾಗುವುದು ಎಂದರು.

ರಾಜ್ಯ ಸರ್ಕಾರ 400 ಕೋಟಿ ರೂ.ಗಳಿಗೆ 1 ಕೋಟಿ ಡೋಸ್ ಪಡೆಯಲು ಆರ್ಡರ್ ಮಾಡಿದೆ. 18 ವಯಸ್ಸಿನಿಂದ 44 ವಯಸ್ಸಾದವರು ಡೋಸ್ ಪಡೆಯಲು ಅರ್ಹರು. ಅದರ ಅನ್ವಯ ಮೂರೂವರೆ ಕೋಟಿ ಜನ ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜಿದೆ ಎಂದು ಸುಧಾಕರ್ ಹೇಳಿದ್ದಾರೆ.

error: Content is protected !!