ರಶೀದಿ ಕೇಳಿದ್ದಕ್ಕೆ ಥಳಿಸಿದ ಪೊಲೀಸರು

ರಶೀದಿ ಕೇಳಿದ್ದಕ್ಕೆ ಥಳಿಸಿದ ಪೊಲೀಸರು - Janathavaniದಾವಣಗೆರೆ, ಏ.30- ಮಾಸ್ಕ್ ಧರಿಸದ ಕಾರಣ ದಂಡ ಕಟ್ಟಿ ರಶೀದಿ ಕೇಳಿದ್ದಕ್ಕೆ ಕೊಡದೇ ಮಾಜಿ ಸೈನಿಕರೋರ್ವರಿಗೆ ಇಲ್ಲಿನ ಗ್ರಾಮಾಂತರ ಪೊಲೀಸರು ಮನಬಂದಂತೆ ಥಳಿಸಿರುವ ಬಗ್ಗೆ ಆರೋಪಿಸಲಾಗಿದೆ.

ಮಾಜಿ ಸೈನಿಕ ಬಿ.ಎಸ್. ವೀರಪ್ಪ  ಅವರು ಇದೇ ಇದೇ ದಿನಾಂಕ 26ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಆನಗೋಡಿಗೆ ಹೋಗುತ್ತಿದ್ದರು. ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಆನಗೋಡು ಬಳಿ ಗ್ರಾಮಾಂತರ ಪೊಲೀಸರು ವಾಹನ ತಡೆದರು. ಮಾಸ್ಕ್ ಧರಿಸದ್ದಕ್ಕೆ 250 ರೂ. ದಂಡ ವಿಧಿಸಿದರು. ಹಣವನ್ನು ಕೊಟ್ಟಿದ್ದಕ್ಕೆ ರಶೀದಿ ಯಾಕೆ ನೀಡಲ್ಲ ಎಂದು ವಾದಿಸಿದ್ದಕ್ಕೆ ನಾನೊಬ್ಬ ಮಾಜಿ ಸೈನಿಕ ಎಂದು ಹೇಳಿದರೂ ಬಲ ಭುಜದ ಮೂಳೆ, ಪಾದಗಳ ಮೂಳೆಗಳು ಮುರಿಯುವಂತೆ ಹೊಡೆದಿದ್ದಾರೆ ಎಂದು ವೀರಪ್ಪ ಆರೋಪಿಸಿದ್ದಾರೆ.

ಮಾಜಿ ಸೈನಿಕರ ಸಂಘ ಆಕ್ರೋಶ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕ ಬಿ.ಎಸ್. ವೀರಪ್ಪನವರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ಮಾಡಿ, ದೌರ್ಜನ್ಯ ಎಸಗಿರುವುದು ಸರಿಯಲ್ಲ. ಈ ಬಗ್ಗೆ ಉನ್ನತ ತನಿಖೆಗೆ ಒತ್ತಾಯಿಸಿ, ಹೋರಾಟ ಮುಂದುವರಿಯಲಿದೆ ಎಂದು ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಎಂ.ಎನ್. ಸತ್ಯಪ್ರಕಾಶ್, ಉಪಾಧ್ಯಕ್ಷ ಎಂ.ಎಸ್. ಮಹೇಂದ್ರಕರ್, ಕಾರ್ಯದರ್ಶಿ ಓ.ಬಿ. ಶಶಿಕಾಂತ್, ಖಜಾಂಚಿ ಎಂ. ದಾಸಪ್ಪ ಇತರರು ಎಚ್ಚರಿಸಿದ್ದಾರೆ. 

error: Content is protected !!