ಕೂಡ್ಲಿಗಿ, ಜು.21- ಗ್ರಾಮದಲ್ಲಿ ಮನೆಯ ಮುಂದೆ ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಿರತೆ ದಾಳಿಯಿಂದ ನಾಯಿಯ ಕುತ್ತಿಗೆಗೆ ಗಾಯವಾಗಿದೆ. ಗ್ರಾಮದ ಕೆ. ವೀರಣ್ಣ ಎನ್ನುವವರ ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಹಿಡಿಯಲು ಚಿರತೆ ಬಂದಿರುವುದನ್ನು ಸ್ಥಳೀಯರು ನೋಡಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ವಿಷಯ ತಿಳಿಯುತ್ತಿದ್ದಂತೆ ಗುಡೇಕೋಟೆ ಅರಣ್ಯ ಇಲಾಖೆ ಯ ಸಿಬ್ಬಂದಿ ಮಂಗಳವಾರ ರಾತ್ರಿ ಯೇ ಎಂ.ಬಿ. ಅಯ್ಯನ ಹಳ್ಳಿಗೆ ಆಗಮಿಸಿದ್ದು, ಚಿರತೆ ಕಾಣಿಸಿ ಕೊಂಡ ಜಾಗದಲ್ಲಿ ಪಟಾಕಿ ಸಿಡಿಸಿದ್ದಾರೆ.
ಚಿರತೆ ಮತ್ತೆ ಗ್ರಾಮಕ್ಕೆ ನುಗ್ಗಿ ಪ್ರಾಣಿಗಳು ಹಾಗು ಜನತೆಯ ಮೇಲೆ ದಾಳಿ ಮಾಡಬಹುದೆಂಬ ಅಂದಾಜಿದ್ದು, ಬೋನಿನ ವ್ಯವಸ್ಥೆ ಮಾಡಿ ಚಿರತೆಯನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ.