ಜಗಳೂರು, ಏ.28- ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೋವಿಡ್ ಎರಡನೆ ಅಲೆಯ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಶ್ರಮಿಸಬೇಕು ಎಂದು ತಹಶೀಲ್ದಾರ್ ಡಾ. ನಾಗವೇಣಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಟಾಸ್ಕ್‌ಫೋರ್ಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ 125 ಪ್ರಕರಣಗಳಲ್ಲಿ 88 ಸಕ್ರಿಯವಾಗಿದ್ದು ಐಸೋಲೇಷನ್ 36, ಉಳಿದಂತೆ ಹೋಂ ಕ್ವಾರಂಟೈನ್ ಆಗಿದ್ದು ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ತಿಳಿಸಿದರು.
ಪಾಸಿಟಿವ್ ಪ್ರಕರಣ ಬಂದಿರುವ ಸ್ಥಳಕ್ಕೆ ಸ್ಥಳಿಯ ಟಾಸ್ಕ್‌ಪೋರ್ಸ್ ಸಮಿತಿ ಯವರು ಭೇಟಿ ನೀಡಿ ಪ್ರಾಥಮಿಕ ವರದಿ ಪಡೆದು ಉನ್ನತ ಅಧಿಕಾರಿಗಳಿಗೆ ತಿಳಿಸ ಬೇಕು. ಪೊಲೀಸ್ ಇಲಾಖೆ ಅಧಿಕಾರಿ ಗಳು ಸಾಮೂಹಿಕ ಸಭೆ, ಸಮಾರಂಭ ನಡೆಸದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು. 40 ವರ್ಷ ಮೇಲ್ಪಟ್ಟ ವಯೋಮಾನದವರು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸರ್ಕಾರದ ಲಾಕ್‌ಡೌನ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾ.ಪಂ ಇಓ ಮಲ್ಲಾನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಪಂಡಿತ್, ಪ.ಪಂ. ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಬಿಸಿಎಂ ಇಲಾಖೆ ಯ ವೆಂಕಟೇಶ್‌ಮೂರ್ತಿ ಸೇರಿದಂತೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.