ವೀರಶೈವ ಸಮುದಾಯವೂ ಅವಕಾಶ ನೀಡಲ್ಲ: ಚನ್ನಗಿರಿ ಹಿರೇಮಠದ ಶ್ರೀಗಳ ಎಚ್ಚರಿಕೆ
ಚನ್ನಗಿರಿ, ಜು.20- ಯಡಿಯೂರಪ್ಪ ಅವರನ್ನೇ ಮುಂದಿನ 2 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಇಲ್ಲದಿದ್ದರೆ ಬಿಜೆಪಿಗೆ ಉಳಿಗಾಲ ಇಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ವೀರಶೈವ ಸಮುದಾಯವೂ ಅವಕಾಶ ನೀಡುವುದಿಲ್ಲ ಎಂದು ಚನ್ನಗಿರಿಯ ಹಿರೇಮಠದ ಶ್ರೀ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ವರ್ಷ ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರಿಸಿದರೆ ಬಿಜೆಪಿಗೆ ಅನುಕೂಲ. ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸೂಕ್ತವಲ್ಲ. ಬಿಜೆಪಿ ಪಕ್ಷದ ಸಂಘಟನೆಗೆ ಕಷ್ಟವಾಗಬಹುದು ಎಂದು ಮುನ್ನೆಚ್ಚರಿಸಿದರು.
ಯಡಿಯೂರಪ್ಪ ಕೇವಲ ವೀರಶೈವ ಲಿಂಗಾಯತ ಸಮಾಜಕ್ಕಷ್ಟೇ ನಾಯಕರಲ್ಲ. ಎಲ್ಲಾ ಜಾತಿ, ವರ್ಗಗಳ ಜನರ ಮನ ಗೆದ್ದ ನಾಯಕ. ಮಠ, ಮಂದಿರ, ಚರ್ಚ್, ಮಸೀದಿಗಳು, ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಸರ್ವ ಧರ್ಮ, ಸರ್ವ ಧರ್ಮೀಯರಿಗೂ ಅನುಕೂಲ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮೀಯರ ಹಿತ ಕಾಯುವ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನದಿಂದ ಕೆಳಗಿಳಿಸಲು ವೀರಶೈವ ಸಮುದಾಯ ಅವಕಾಶ ನೀಡುವುದಿಲ್ಲ ಎಂದ ಅವರು, ತಮ್ಮ ಎಲ್ಲಾ ಮಠ ಮಾನ್ಯಗಳೂ ಯಡಿಯೂರಪ್ಪ ಪರ ಇರುವುದಾಗಿ ಬೆಂಬಲ ಸೂಚಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕನಿಗೆ ಪಕ್ಷದ ರಾಷ್ಟ್ರೀಯ ನಾಯಕರು ಗೌರವ ದಿಂದ ನಡೆಸಿಕೊಳ್ಳಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗಮನ ಹರಿಸಬೇಕು ಎಂದಿದ್ದಾರೆ.