ದಾವಣಗೆರೆ, ಮಾ. 2- ನಗರದ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಯಿ ಸಂಜನ ಅವರು, ಧಾರವಾಡದ ಕರ್ನಾಟಕ ಬಾಲ ಅಕಾಡೆಮಿಯು ಬಹುಮುಖ ಪ್ರತಿಭೆ ವಿಭಾಗದಲ್ಲಿ ನೀಡುವ ‘ಬಾಲ ಗೌರವ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭರತ ನಾಟ್ಯ ವಿಭಾಗದಲ್ಲಿ ಆಯ್ಕೆಯಾಗಿರುವ ಸಾಯಿ ಸಂಜನಾ ಅವರಿಗೆ ದಿನಾಂಕ 28-02-2021 ರಂದು ಧಾರವಾಡದ ಕಲಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಪ್ರದಾನ ಮಾಡಿದರು.
ಸಾಯಿ ಸಂಜನಾ ಅವರು 2018ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ನೀಡುವ ‘ಅಸಾಧಾರಣ ಪ್ರತಿಭೆ’ ಪ್ರಶಸ್ತಿಗೂ ಸಹ ಭಾಜನರಾಗಿರುವ ಇವರು ನೂಪುರ ಕಲಾ ಸಂಸ್ಥೆಯ ಸ್ಥಾಪಕರಾದ ಶ್ರೀಮತಿ ಬೃಂದಾ ಶ್ರೀನಿವಾಸ್ ಅವರಲ್ಲಿ ಭರತ ನಾಟ್ಯ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಾಗೂ ಪೀಸ್ ಆಫ್ ಮೈಂಡ್ ಟಿ.ವಿ. ವಾಹಿನಿಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುವ ಸಾಯಿ ಸಂಜನಾ ಬಾಲಾಜಿ ಇಂಡಸ್ಟ್ರೀಸ್ನ ಮಾಲೀಕರಾದ ಕೆ. ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ವರಲಕ್ಷ್ಮಿ ಇವರ ಸುಪುತ್ರಿ.