ಆದರ್ಶ ವ್ಯಕ್ತಿಗಳ ಪ್ರತಿಮೆಗಳು ಬೀದಿಯಲ್ಲಿರಬಾರದು

ಮಲೇಬೆನ್ನೂರು : ಡಾ. ಅಂಬೇಡ್ಕರ್ ಜಯಂತಿಯಲ್ಲಿ ಆದಿ ಜಾಂಬವ ಮಠದ ಸ್ವಾಮೀಜಿ ಕರೆ

ಮಲೇಬೆನ್ನೂರು, ಏ.27- ಶೋಷಣೆಗೆ ಒಳಗಾಗಿರುವ ಎಲ್ಲಾ ಜಾತಿಯ ಜನರು ಪುಸ್ತಕವನ್ನು ಪ್ರೀತಿ ಮಾಡಿ, ಜ್ಞಾನದಲ್ಲಿ ಎತ್ತರಕ್ಕೆ ಬೆಳೆದು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಮತ್ತು ಗಟ್ಟಿ ಬದುಕಿಗಾಗಿ ನಿರಂತರ ಹೋರಾಟ ಮಾಡಿ ಎಂದು ಹಿರಿಯೂರಿನ ಆದಿ ಜಾಂಬವ ಮಹಾ ಸಂಸ್ಥಾನದ ಕೋಡಿಹಳ್ಳಿ ಮಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.

ಇಂದು ಜಿಗಳಿ ಗ್ರಾಮದ ಎ.ಕೆ. ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಮತ್ತು ಮಾಜಿ ಉಪ ಪ್ರಧಾನಿ, ರಾಷ್ಟ್ರನಾಯಕ ಬಾಬು ಜಗಜೀವನ್ ರಾಂ ಅವರ 114 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ನಿರೀಕ್ಷೆಯ ಜನರಾಗದೆ ಸಾಧಕ ರಾಗೋಣ ಎಂದು ಜನರನ್ನು ಹುರಿದುಂಬಿಸಿದ ಶ್ರೀಗಳು, ಅಂಬೇಡ್ಕರ್, ಜಗಜೀವನ್‌ ರಾಂ ಅವರ ಲೋಕಮಾನ್ಯ ಗುಣಗಳು ತಳ ಸಮುದಾ ಯದ ಜನರಲ್ಲಿ ಹಾಸು ಹೊಕ್ಕಾಗಬೇಕು. ಆದರ್ಶ ಪುರುಷರ ಜಯಂತಿಗಳ ಆಚರಣೆಯ ಜೊತೆಗೆ ಅವರ ಆದರ್ಶ, ತತ್ವ-ಸಿದ್ಧಾಂತಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳೋಣ ಎಂದರು.

ಆದರ್ಶ ವ್ಯಕ್ತಿಗಳ ಪ್ರತಿಮೆಗಳು ಬೀದಿಯಲ್ಲಿರಬಾರದು. ಶೋಷಿತರ ಉಸಿರಿನಲ್ಲಿ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಪ್ರಾಸ್ತಾವಿಕ ಮಾತನಾಡಿ, ದೇಶಕ್ಕೆ ಪವಿತ್ರ ಸಂವಿಧಾನ ನೀಡಿದ ಫಲವಾಗಿ, ಈ ದಿನ ನಾವೆಲ್ಲರೂ ತಲೆ ಎತ್ತಿ ಬದುಕುವಂತೆ ಮಾಡಿ ರುವ ಅಂಬೇಡ್ಕರ್ ಅವರ ಜಯಂತಿಯನ್ನು ಪ್ರತಿದಿನ ಆಚರಿಸಿದರೂ ಸಾಲದು ಎಂದರು.

ಗ್ರಾ.ಪಂ. ಸದಸ್ಯ ಕೆ.ಜಿ. ಬಸವರಾಜ್, ಗ್ರಾಮದ ವೈದ್ಯ ಡಾ. ಎನ್. ನಾಗರಾಜ್, ಜಿ.ಪಿ. ಹನುಮಗೌಡ, ಬೆಸ್ಕಾಂ ಉದ್ಯೋಗಿ ಲಕ್ಷ್ಮಣ್, ಶಿಕ್ಷಕ ಹೆಚ್. ರವಿಕುಮಾರ್ ಮಾತನಾಡಿದರು. 

ಕಾಲೋನಿಯ ಮುಖಂಡ ಬಿ. ಬಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಕರಿಯಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ದೇವೇಂದ್ರಪ್ಪ, ಬಿಳಸನೂರು ಚಂದ್ರಪ್ಪ, ಕೆ.ಆರ್. ರಂಗಪ್ಪ, ಎ.ಕೆ. ರಂಗಪ್ಪ, ಸರ್ವೇ ಪರಮೇಶ್ವರಯ್ಯ, ಡಿಸಿಸಿ ಬ್ಯಾಂಕ್‌ ಮಲೇಬೆನ್ನೂರು ಶಾಖೆಯ ವ್ಯವಸ್ಥಾಪಕ ಸುರೇಶ್, ಪತ್ರಕರ್ತ ಪ್ರಕಾಶ್, ಸಾರಿಗೆ ನೌಕರ ಡಿ. ಸೋಮಪ್ಪ ಸೇರಿದಂತೆ ಡಿಎಸ್‌ಎಸ್‌ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಚೌಡಪ್ಪ ಸ್ವಾಗತಿಸಿದರು. ಹೆಚ್.ಎಸ್. ಮಂಜುನಾಥ್ ನಿರೂಪಿಸಿದರು. ಗ್ರಾ.ಪಂ. ಮಾಜಿ ಸದಸ್ಯ ಎ.ಕೆ. ಅಡಿವೇಶ್ ವಂದಿಸಿದರು.

error: Content is protected !!