‘ಡಿ’ ಗ್ರೂಪ್ ನೇಮಕಾತಿ, ವೇತನದಲ್ಲಿ ಅವ್ಯವಹಾರ : ದೂರು

ಹರಪನಹಳ್ಳಿ, ಏ.27-  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ ಸಿಬ್ಬಂದಿಗಳಿಗೆ ಖಾಸಗಿ ಏಜೆನ್ಸಿಗಳು ಕನಿಷ್ಟ ವೇತನ, ಭವಿಷ್ಯ ನಿಧಿ ಸೌಲಭ್ಯವಿಲ್ಲದೇ ವೇತನ ಪಾವತಿಗೆ ಲಂಚ ಪಡೆಯುತ್ತಿದ್ದಾರೆ ಎಂದು ದಲಿತ ಮುಖಂಡ ಕಣಿವಿಹಳ್ಳಿ ಮಂಜುನಾಥ್ ಅವರು ಆರೋಪಿಸಿ, ಎಸಿಬಿ ಸಂಸ್ಥೆ ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ 30 ಜನ ‘ಡಿ’ ದರ್ಜೆ ಮತ್ತು ನಾನ್ ಕ್ಲಿನಿಕ್ ಮತ್ತು ಕೋವಿಡ್-19ರ ಅಡಿ ಗ್ರೂಪ್ ನೌಕರರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಏಜೆನ್ಸಿಗಳು ಸರ್ಕಾರಿ ಸುತ್ತೋಲೆ ಪ್ರಕಾರ ‘ಡಿ’ ಗ್ರೂಪ್ ಮತ್ತು ನಾನ್ ಕ್ಲಿನಿಕ್ ಒಳಗೊಂಡು 30 ಜನ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಯಾವುದೇ ಮಾನದಂಡವನ್ನು ಅನುಸರಿಸಿಲ್ಲ ಎಂದು ದೂರಿದ್ದಾರೆ. 

ಒಂದೇ ಕೋಮಿನ, ಅಧಿಕಾರಿ, ಸಿಬ್ಬಂದಿಗಳ ಸಂಬಂಧಿಕರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನೇಮಿಸಿಕೊಂಡಿದ್ದಾರೆ. ಇದರಲ್ಲಿ ಆಸ್ಪತ್ರೆ ಅಧಿಕಾರಿ ಗಳು ಪಾಲುದಾರರಿದ್ದಾರೆ ಎಂದು ಆರೋಪಿಸಿದರು.

ನೌಕರರಿಗೆ ಏಜೆನ್ಸಿಯವರು ಪಿಎಫ್, ಇಎಸ್‌ಐ ಸವಲತ್ತು ಕಲ್ಪಿಸದೇ ಸಂಬಳ ಪಾವತಿಸಿ ದ್ದಾರೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮತ್ತು ಸಹಾಯಕ ಆಡಳಿತಾಧಿಕಾರಿಯವರ ಹೊಂದಾಣಿಕೆ ಯಿಂದ ಅರ್ಹ ಬಡ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ. ಒಂದೇ ಜಾತಿ, ಸಂಬಂಧಿಕರನ್ನೇ ಕೆಲಸಕ್ಕೆ ನೇಮಕಾತಿ ಮಾಡಿಕೊಂಡಿದ್ದು, ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆಪಾದಿಸಿದ್ದಾರೆ.

ಪ್ರತಿ ತಿಂಗಳು ಸಂಬಳ ಪಾವತಿಸುವ ವೇಳೆ 500 ರೂಪಾಯಿಯಂತೆ ‘ಡಿ’ ಗ್ರೂಪ್ ನೌಕರನಿಂದಲೇ ಹಣ ವಸೂಲಿ ಮಾಡಿಸುತ್ತಿದ್ದಾರೆ. ಲಂಚ ಕೊಡಲು ನಿರಾಕರಿಸಿದರೆ ಸಂಬಳ ಕೊಡುವುದಿಲ್ಲ. ಮುಂದೆ ಹೊಸ ಏಜೆನ್ಸಿ ಬಂದಾಗ ಕೆಲಸದಿಂದ ಕಿತ್ತು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಒಳಗೊಂಡ ದೂರನ್ನು ಉಸ್ತುವಾರಿ ಸಚಿವರು, ಎಸಿಬಿ, ಆರೋಗ್ಯ ಸಚಿವರಿಗೆ ದೂರು ಸಲ್ಲಿಸಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆ ಆಗಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ದಲಿತ ಮುಖಂಡ ಮಂಜುನಾಥ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

error: Content is protected !!