15-20 ದಿನಗಳಲ್ಲಿ ಭರಮಸಾಗರ ದೊಡ್ಡ ಕೆರೆಗೆ ಭದ್ರಾ ನೀರು: ಶಾಸಕ ಎಂ. ಚಂದ್ರಪ್ಪ

ಭರಮಸಾಗರ, ಜು.20- ಜನಪ್ರಿಯ ಪಾಳೆಗಾರ ಮದಕರಿನಾಯಕ ವಂಶದ ಭರಮಣ್ಣ ನಾಯಕ ನಿರ್ಮಿಸಿದ ಐತಿಹಾಸಿಕ ಭರಮಸಾಗರ ದೊಡ್ಡಕೆರೆಗೆ ಇನ್ನೇನು ಕೇವಲ 20-25 ದಿನಗಳ ಅಂತರದಲ್ಲಿ ಭದ್ರಾ ನೀರು ಹರಿದು ಬರಲಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಭರಮಸಾಗರ ದೊಡ್ಡಕೆರೆ ಬಳಿ ಜಾಕ್‌ವೆಲ್-2ರ ಕಾಮಗಾರಿ ವೀಕ್ಷಿಸಿದ ಶಾಸಕರು, ಈ ವಿಷಯ ತಿಳಿಸಿದರಲ್ಲದೇ, ಭರಮ ಸಾಗರ ದೊಡ್ಡಕೆರೆಯನ್ನು ಉತ್ತಮ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಬಹುಕೋಟಿ ವೆಚ್ಚದ ಏತ ನೀರಾವರಿ ನೀರು ತುಂಬಿಸುವ ಯೋಜನೆಯ ಕಾಮಗಾರಿಯ ಮೊದಲ ಹಂತ ಶೇ 85ರಷ್ಟು ಪೂರ್ಣಗೊಂಡಿದೆ. 

ಆನಗೋಡು-ಹೆಬ್ಬಾಳು ಭಾಗದಲ್ಲಿ ಸಣ್ಣಪುಟ್ಟ ರೈತರ ಹಾಗು ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯಿಂದಾಗಿ ಕಾಮಗಾರಿ ಕೊಂಚ ಹಿನ್ನಡೆ ಕಂಡಿದೆ. ಶೀಘ್ರ ಇವನ್ನೆಲ್ಲಾ ಪರಿಹರಿಸಿ, ಯೋಜಿತ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕರು ಮಾಧ್ಯಮ ಮಿತ್ರರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಸದಾ ಬೆಂಬಲ ವ್ಯಕ್ತಪಡಿಸುವ ಗ್ರಾಮದ ಹಿರಿಯ ಮುಖಂಡ, ಜಿ.ಪಂ. ಸದಸ್ಯ ಡಿ.ವಿ ಶರಣಪ್ಪ, ಕೋಗುಂಡೆ ಮಂಜಣ್ಣ, ಚವಲಿಹಳ್ಳಿ ಶೈಲೇಶ್, ಸಾಮಿಲ್ ಶಿವಣ್ಣ, ಲಾಯರ್ ಪಣಿಯಪ್ಪ, ಎಸ್. ನಾರಾಯಣರಾವ್, ಎ.ಎಸ್. ಸಿದ್ದಲಿಂಗಪ್ಪ, ಅನಂತಪದ್ಮನಾಭರಾವ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!