ರಾಣೇಬೆನ್ನೂರು ನಗರಸಭೆ : 1.5 ಕೋಟಿ ರೂ. ಉಳಿತಾಯ ಬಜೆಟ್

ರಾಣೇಬೆನ್ನೂರು, ಮಾ.1- ಇಲ್ಲಿನ ನಗರಸಭೆ ವಿವಿಧ ಮೂಲಗಳ ಆದಾಯ ಕ್ರೋಢೀಕರಿಸಿ, ನಗರದ ಜನತೆಗೆ ಮೂಲ ಭೂತ  ಸೌಕರ್ಯ ಒದಗಿಸಲು ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ವಿವಿಧ ಕಾರ್ಯಗಳನ್ನು ಅಳವಡಿಸಿಕೊಂಡು ಒಂದೂವರೆ ಕೋಟಿಯಷ್ಟು ಹಣ ಉಳಿಸುವ ಮುಂಗಡ ಪತ್ರವನ್ನು ಮಂಡಿಸಿದ ನಗರಾ ಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಸರ್ವಾನುಮತದ ಮಂಜೂರಾತಿ ಪಡೆದುಕೊಂಡರು.

ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ನೀರಿನ ಕಂದಾಯ, ಅಭಿವೃದ್ಧಿ ಕರ, 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ, ಎಸ್‌ ಎಫ್‌ಸಿ ವಿಶೇಷ ಅನುದಾನ, ಗೃಹ ಭಾಗ್ಯ ಅನುದಾನ ಮುಂತಾದ ಆದಾಯ ಮೂಲ ಗಳೊಂದಿಗೆ, ರಸ್ತೆ, ಗಟಾರ, ವಿದ್ಯುತ್ ಮತ್ತು ನೀರು ಸರಬರಾಜು, ವಿದ್ಯುತ್ ಚಿತಾಗಾರ, ಪಾರ್ಕ್ ಅಭಿವೃದ್ಧಿ, ಮೊಬೈಲ್ ಶೌಚಾ ಲಯ, ಸೂಪರ್ ಮಾರ್ಕೆಟ್ ಮುಂತಾದ ಯೋಜನೆಗಳನ್ನು ರೂಪಿಸಲಾಗಿದೆ.

ಪ್ರಾರಂಭಿಕ ಶಿಲ್ಕು ಸೇರಿದಂತೆ ನಿರೀಕ್ಷಿತ ರಾಜಸ್ವ, ನಿರೀಕ್ಷಿತ ಬಂಡವಾಳ, ನಿರೀಕ್ಷಿತ ಅಸಾಮಾನ್ಯ ಜಮೆಗಳಿಂದ ಒಟ್ಟು 7173 ಲಕ್ಷಗಳ ಆದಾಯದ ನಿರೀಕ್ಷೆಯಲ್ಲಿ, ರಾಜಸ್ವ ಪಾವತಿ, ಬಂಡವಾಳ ಪಾವತಿ, ಅಸಾಮಾನ್ಯ ಪಾವತಿಗಳಿಗೆ ಒಟ್ಟು 7600 ಲಕ್ಷ ಖರ್ಚು ಮಾಡಿ  157 ಲಕ್ಷ ಉಳಿತಾಯ ಮಾಡುವ  ಬಜೆಟ್ ಇದಾಗಿದೆ.

ಸೂಟ್ ಕೇಸ್ ಹಿಡಿದು ಬಂದ ಅಧ್ಯಕ್ಷೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೃಪೆ,   ಅಧ್ಯಕ್ಷ ಗಾದೆ ಪಡೆದ ತವರೂರು ಶಿಕಾರಿಪುರದ ಹಿಂದುಳಿದ ನೇಕಾರ ಸಮಾಜದ ರೂಪ ಚಿನ್ನಿಕಟ್ಟಿ ಅವರು, ಬಜೆಟ್ ಪ್ರತಿಯ ಸೂಟ್‌ಕೇಸ್‌ನೊಂದಿಗೆ ಸಭೆಗೆ ಪ್ರವೇಶಿಸಿದರು. ಪೌರಾಯುಕ್ತ ಡಾ. ಮಹಾಂತೇಶ ಸಾಥ್ ನೀಡಿದರು. ರೈತ ಗೀತೆಯೊಂದಿಗೆ ಬಜೆಟ್ ಮಂಡಿಸುತ್ತಾ, ಸರ್ವಜ್ಞನ ವಚನ ಹಾಗೂ ಮಂಕುತಿಮ್ಮನ ಸಾಲುಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದರು.

ಮಂತ್ರಿ ಗೈರು, ಸಭೆ ಮುಂದಕ್ಕೆ ?

ಇಂದು 12 ಗಂಟೆಗೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಭೆ ನಿಗದಿ ಪಡಿಸಿ ನೋಟಿಸ್ ಸಹ ಹೊರಡಿಸಲಾಗಿತ್ತು. ಆದರೆ ಇಲ್ಲಿನ ಮತದಾರರೇ ಅಲ್ಲದ ಮಂತ್ರಿಯೊಬ್ಬರ ಗೈರು ಹಾಜರಿಯಿಂದಾಗಿ ಅಧ್ಯಕ್ಷರ ಆಯ್ಕೆಯ ಸಭೆಯನ್ನು ಮುಂದೂಡಲಾಯಿತು ಎಂದು ತಿಳಿದು ಬಂದಿದೆ.

ಇತಿಹಾಸದ ನೆನಪು: ಬಣಗಾರ ಸಾವು ಕಾರ, ಹರಪನಹಳ್ಳಿ ವಕೀಲರು, ಮಾಜಿ ಶಾಸಕ ಜಿ. ಶಿವಣ್ಣ ಸೇರಿದಂತೆ ಮಹಾನ್ ಮೇಧಾವಿಗಳು ಈ ಸದನದ ಹಾಗೂ ಸಭೆಯ ಗೌರವ ಕಾಪಾಡಿದ್ದಾರೆ. ಈ ಕುರ್ಚಿಯಲ್ಲಿ ಕುಳಿತವರೆಲ್ಲರನ್ನೂ ಗೌರವ ದಿಂದ ಕಾಣುವ ಪರಂಪರೆ ಪಾಲಿಸಿಕೊಂಡು ಬಂದಿದ್ದಾರೆ. ಅದು ಎಂದೆಂದಿಗೂ ಮುಂದುವರೆಯುವಂತೆ ಹೊಸಬ ಹಾಗೂ ಹಳೆಯ ಸದಸ್ಯರೆಲ್ಲರೂ  ಶ್ರಮಿಸಬೇಕು. 

ಬಹಳಷ್ಟು ಸಂಖ್ಯೆಯ ಹೊಸ ಸದಸ್ಯರು ಈ ದಿಸೆಯಲ್ಲಿ ಪ್ರಯತ್ನ ಮಾಡಬೇಕು ಎಂದು ಪುಟ್ಟಪ್ಪ ಮರಿಯಮ್ಮನವರ ಮನವಿ ಮಾಡಿದರು. ಆಡಳಿತ ನಡೆಸುವವರು ಸಹ ಅಧಿಕಾರದ ಅಹಂ ಪ್ರದರ್ಶಿಸಬಾರದು. ವಿರೋಧ ಪಕ್ಷದವರ ಜೊತೆ ಸಹಕಾರ ನೀಡುವಂತೆ  ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಶಾಸಕ ಅರುಣಕುಮಾರ ಪೂಜಾರ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಪೌರಾಯುಕ್ತ ಡಾ. ಮಹಾಂತೇಶ, ಲೆಕ್ಕಾಧಿ ಕಾರಿ ವಾಣಿಶ್ರೀ, ಹಿರಿಯ ಅಭಿಯಂತರ ಕೃಷ್ಣಮೂರ್ತಿ ಇದ್ದರು. ಪೌರಾಯುಕ್ತ ಮಹಾಂತೇಶ ಸ್ವಾಗತಿಸಿದರು. ಮಧು ಸಭೆ ನಡವಳಿಕೆ ಪ್ರಸ್ತಾಪಿಸಿದರು.

error: Content is protected !!