ಕೊಮಾರನಹಳ್ಳಿ ಕೆರೆಗೆ ಹರಿದ ಹಾಲುವರ್ತಿ ಸರದ ನೀರು

ಮಲೇಬೆನ್ನೂರು, ಜು.19 – ಕಳೆದ 2-3 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಕೊಮಾರನಹಳ್ಳಿ ಕೆರೆಯ ನೀರಿನ ಮೂಲವಾಗಿದ್ದ ಹಾಲುವರ್ತಿ ಸರದ ನೀರು ಹಲವು ವರ್ಷಗಳ ಬಳಿಕ ಕೆರೆಗೆ ಹರಿಯಲು ಆರಂಭಿಸಿದೆ.

ಹಾಲುವರ್ತಿ ಸರದ ನೀರು ಕೊಮಾರನಹಳ್ಳಿ ಕೆರೆಗೆ ಹರಿಯಲು ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗ್ರಾಮಸ್ಥರು, ಹಾಲುವರ್ತಿ ಸರದ ನೀರು ಹರಿದು ಬರುವಂತೆ ಕಾಲುವೆ ಕಾಮಗಾರಿ ಮಾಡಿಸಿಕೊಟ್ಟ ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.

ಈ ಹಿಂದೆ ಹಾಲುವರ್ತಿ ಸರದ ನೀರು ಹರಿದು ಬರುವ ಜಾಗವನ್ನು ಮುಚ್ಚಿ ಕೆಲವರು ಉಳುಮೆ ಮಾಡಿಕೊಂಡಿದ್ದರು, ಕಳೆದ ವರ್ಷ ಈ ವಿಷಯವನ್ನು ಗ್ರಾಮಸ್ಥರು ಜಿ.ಪಂ ಸದಸ್ಯರಾಗಿದ್ದ ವಾಗೀಶ್‌ ಸ್ವಾಮಿ ಅವರಿಗೆ ತಿಳಿಸಿದ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸರದ ನೀರು ಹರಿದು ಬರುವ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಕಾಲುವೆ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊಮಾರನಹಳ್ಳಿ ಕೆರೆಗೆ ಗುಡ್ಡಗಳಿಂದ ಹರಿದು ಬರುತ್ತಿದ್ದ ನೀರಿನ ಸರಗಳನ್ನು ಮುಚ್ಚಿರುವುದರಿಂದ ಕಳೆದ ಅನೇಕ ವರ್ಷಗಳಿಂದ ಕೆರೆಗೆ ಸಾಕಷ್ಟು ನೀರು ಹರಿದು ಬಂದಿರಲಿಲ್ಲ, ಇದನ್ನು  ಮನಗಂಡ ಗ್ರಾಮಸ್ಥರು ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ, ಪಕ್ಷಿಗಳಿಗೆ, ಕಾಡು ಪ್ರಾಣಿಗಳಿಗೆ ಅನುಕೂಲವಾಗಲೆಂದು ಕಳೆದ ವರ್ಷ ಭದ್ರಾ ಕಾಲುವೆಯಿಂದ ಪಂಪ್‍ ಸೆಟ್‌ಗಳ ಮೂಲಕ ಕೆರೆಗೆ ನೀರು ಹರಿಸಿ ಭರ್ತಿ ಮಾಡಿದ್ದರು. ಈ ಬಾರಿಯೂ ಸಹ ಮಳೆ ನೀರಿನಿಂದ ಕೆರೆ ಭರ್ತಿಯಾಗದಿದ್ದರೆ ಕಾಲುವೆಯಲ್ಲಿ ನೀರು ಬಿಟ್ಟಾಗ ಕೆಳಭಾಗದ ರೈತರಿಗೆ ತೊಂದರೆ ಆಗದಂತೆ ಕೆರೆಗೆ ನೀರು ತುಂಬಿಸಿ ಕೊಳ್ಳುವ ಸಾಧ್ಯತೆ ಇದೆ.

error: Content is protected !!