ಮಲೇಬೆನ್ನೂರು, ಏ.27- ಪಟ್ಟಣದಲ್ಲಿ ಕೊರೊನಾ 2ನೇ ಅಲೆ ಸದ್ಯ ನಿಯಂತ್ರಣದಲ್ಲಿದ್ದು, ಇದುವರೆಗೂ 5 ಜನರಿಗೆ ಮಾತ್ರ ಕೊರೊನಾ ಸೋಂಕು ತಗುಲಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ತಿಳಿಸಿದರು.
ಅವರು ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಕೊರೊನಾ ಲಾಕ್‌ಡೌನ್ ಮತ್ತು ಕೊರೊನಾ ಟೆಸ್ಟ್ ಹಾಗೂ ಲಸಿಕೆ ವಿಚಾರವಾಗಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಉಪ ತಹಶೀಲ್ದಾರ್ ಆರ್. ರವಿ ಮಾತನಾಡಿ, ಕೃಷಿ ಚಟುವಟಿಕೆ, ಕಟ್ಟಡ ಹಾಗೂ ನರೇಗಾ ಕಾಮಗಾರಿಗಳಿಗೆ ಅಡ್ಡಿ ಇಲ್ಲ. ಕೋವಿಡ್‌ಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿರುವ ಸಿಬ್ಬಂದಿ ಕಚೇರಿಗಳಿಗೆ ಹಾಜರಿರಬೇಕು. ತುರ್ತು ಸಂದರ್ಭ ದಲ್ಲಿ ಆಟೋ, ಟ್ಯಾಕ್ಸಿ ಬಳಸಬಹುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ. ಪ್ರತಿ ದಿನ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಿಗೆ ಅವಕಾಶ ಇದ್ದು, 10 ಗಂಟೆಯ ನಂತರ ವಿನಾಕಾರಣ ರಸ್ತೆಗೆ ಬಂದರೆ ಶಿಸ್ತು ಕ್ರಮ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯ ಬಿ.ಎಂ. ಚನ್ನೇಶ್ ಸ್ವಾಮಿ ಅವರು ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ಮತ್ತು ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಡಿ ಎಂದು ವೈದ್ಯಾಧಿಕಾ ರಿಗಳನ್ನು ಕೇಳಿದಾಗ, ಸಿಬ್ಬಂದಿ ಕೊರತೆ ಕಾರಣ ವಾರ್ಡ್‌ಗಳಿಗೆ ಸಿಬ್ಬಂದಿ ನಿಯೋಜನೆ ಕಷ್ಟವಾಗು ತ್ತದೆ. ಸದಸ್ಯ ಆಸ್ಪತ್ರೆಗೆ ನಿಮ್ಮ ವಾರ್ಡ್ ಜನರನ್ನು ಕರೆ ತನ್ನಿ ಎಂದು ಡಾ. ಲಕ್ಷ್ಮೀದೇವಿ ಹೇಳಿದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಸೇರಿದಂತೆ ಸದಸ್ಯರು, ಅಧಿಕಾರಿಗಳು ಮತ್ತು ಪ್ರೊಬೇಷನರಿ ಪಿಎಸ್‌ಐ ಪಾಂಡುರಂಗಪ್ಪ, ಎಎಸ್‌ಐ ಬಸವರಾಜಪ್ಪ, ಹನುಮಂತಪ್ಪ ಸಭೆಯಲ್ಲಿದ್ದರು.