ಟೈಲರ್ ಅಂಗಡಿಗಳಿಗೆ ಸರ್ಕಾರ ಅನುವು ಮಾಡಿಕೊಡಲಿ, ಇಲ್ಲವೇ ಪರಿಹಾರ ನೀಡಿ

ಟೈಲರ್ ಅಂಗಡಿಗಳಿಗೆ ಸರ್ಕಾರ ಅನುವು ಮಾಡಿಕೊಡಲಿ, ಇಲ್ಲವೇ ಪರಿಹಾರ ನೀಡಿ - Janathavaniದಾವಣಗೆರೆ, ಏ.27- ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ, ಅಗತ್ಯ ವಸ್ತು, ಸೇವೆಗಳಿಂದ ಟೈಲರ್ ಅಂಗಡಿಗಳನ್ನು ಹೊರಗಿಟ್ಟಿರುವುದು ಸರಿಯಲ್ಲ ಎಂದು ಟೈಲರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕರ್ಫ್ಯೂ ಜಾರಿಗೊಳಿಸುವ ಭರದಲ್ಲಿ ಇದನ್ನು ಮರೆತಿರುವುದು ವಿಷಾದನೀಯ. ಕಳೆದೊಂದು ವರ್ಷದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಟೈಲರ್‍ ಗಳು, ಇತ್ತೀಗಷ್ಟೇ ಸುಧಾರಿಸಿಕೊಳ್ಳುವ ಹಂತದಲ್ಲಿದ್ದಾಗ ಸರ್ಕಾರ ಮತ್ತೆ ಕರ್ಫ್ಯೂ ಬರೆ ಎಳೆಯುವ ಮೂಲಕ ಬಡ ದರ್ಜಿಗಳ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಲಾಕ್‍ಡೌನ್ ಅವಧಿಯಲ್ಲಿ ಶ್ರಮಿಕ ವರ್ಗಗಳಿಗೆ ತಲಾ 5 ಸಾವಿರ ರೂ. ಪರಿಹಾರ ಧನ ಘೋಷಣೆ ಮಾಡಿದ್ದ ಸರ್ಕಾರವು ಟೈಲರ್‍ಗಳಿಗೆ ಯಾವುದೇ ನೆರವು ನೀಡಲಿಲ್ಲ. ಹೀಗಾಗಿ ಟೈಲರ್ ವೃತ್ತಿಯನ್ನೇ ನಂಬಿಕೊಂಡಿದ್ದ ವೃದ್ಧರು, ವಿಧವೆಯರು ಜೀವನ ಸಾಗಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಇದನ್ನೆಲ್ಲಾ ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. 

ಸರ್ಕಾರ ಹೇರ್ ಸಲ್ಯೂನ್, ಬ್ಯೂಟಿ ಪಾರ್ಲರ್, ಸ್ಪಾ ಮುಂತಾದ ಸೌಂದರ್ಯ ಕಾಳಜಿಯ ಚಟುವಟಿಕೆ ಗಳಿಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ? ಎಂಬುದನ್ನು ಸರ್ಕಾ ರವೇ ಸ್ಪಷ್ಟಪಡಿಸಬೇಕು. ಕೇವಲ ಬಟ್ಟೆಗಳ ಅಳತೆ ತೆಗೆ ದುಕೊಂಡು, ಗ್ರಾಹಕರಿಂದ ದೈಹಿಕ ಅಂತರ ಕಾಯ್ದು ಕೊಂಡು ಬಟ್ಟೆ ಹೊಲಿಯಲು ಅವಕಾಶವಿರುವಾಗ ಟೈಲರ್ ಅಂಗಡಿಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರದ ನಡೆ ಖಂಡನೀಯ. ಕೂಡಲೇ ಸರ್ಕಾರ ಟೈಲರ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ, ಇಲ್ಲವಾದರೆ ಪ್ರತಿ ದರ್ಜಿಗಳಿಗೆ ಕನಿಷ್ಟ 10 ಸಾವಿರ ರೂ. ಪರಿಹಾರ ಧನ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!