ಜಗಳೂರು, ಏ.26- ಶಾಸಕರ ಸೂಚನೆಯಂತೆ ತಾಲ್ಲೂಕಿನ ಮೆದಗಿನಕೆರೆ ಗ್ರಾಮದ ಹತ್ತಿರವಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್ ಸೋಂಕಿತರಿಗೋಸ್ಕರ ಕೋವಿಡ್ ಕೇರ್ ಸೆಂಟರ್‌ಗೆ ತಾಲ್ಲೂಕು ಆಡಳಿತವು ಸಕಲ ಸಿದ್ಧತೆ ಮಾಡಿದೆ.
ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೆದಗಿನಕೆರೆ ಗ್ರಾಮದ ಹತ್ತಿರವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಸೂಚನೆ ನೀಡಲಾಗಿತ್ತು. ಅದರಂತೆ ಇಂದು ತಾಲ್ಲೂಕು ದಂಡಾಧಿಕಾರಿ ಡಾ. ನಾಗವೇಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಇಂದು ಕೋವಿಡ್ ಸೋಂಕಿತರಿಗೆ ಮೀಸಲಿಟ್ಟಿರುವ 6 ಕೊಠಡಿಗಳನ್ನು ಒಳಗೊಂಡಂತೆ ಸ್ಯಾನಿಟೈಸೇಷನ್ ಮಾಡಿಸಿ, ಕೋವಿಡ್ ಸೋಂಕಿತರಿಗೆ 50 ಬೆಡ್ ಗಳನ್ನು ಹಾಕುವ ಮುಖಾಂತರ ಕೋವಿಡ್ ಸೆಂಟರ್ ಸಿದ್ಧತೆಗೊಳಿಸಿದರು.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಬಿ. ಮಹೇಶ್ವರಪ್ಪ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ್, ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಿ.ಎನ್. ರೂಪಕಲಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.