ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ: ಪ್ರತಿಭಟನೆ

ದಾವಣಗೆರೆ, ಮಾ.1- ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ನಗರದಲ್ಲಿ ಇಂದು ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಿದರು.

ದೇವರಾಜ್‌ ಅರಸು ಬಡಾವಣೆಯಲ್ಲಿನ ನ್ಯಾಯಾಲಯದ ಸಂಕೀರ್ಣದ ಆವರಣ ದಿಂದ ಪ್ರತಿಭಟನಾ ಮೆರವಣಿಗೆ ‌ಮುಖೇನ ಪಿ.ಬಿ. ರಸ್ತೆ ಬಳಿ ಆಗಮಿಸಿದ ವಕೀಲರು ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿಯೇ ವಕೀಲ ವೆಂಕಟೇಶ್  ಎಂಬುವವರನ್ನು ಇತ್ತೀಚೆಗೆ ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಿ ರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು. ನಂತರ ಮೆರವಣಿಗೆ ಮುಖೇನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ತೆಲಂಗಾಣದಲ್ಲಿ ವಕೀಲ ದಂಪತಿ ಗಟ್ಟು ವಾಮನ್ ರಾವ್ ಮತ್ತು ಪಿ.ಬಿ. ನಾಗ ಮಣಿ ಅವರನ್ನೂ ಸಹ ನಡು ರಸ್ತೆಯಲ್ಲಿಯೇ ಹತ್ಯೆ ಮಾಡಲಾಗಿದೆ. ಅದರಂತೆ ಈ ಹಿಂದೆಯೂ ಸಹ ಅನೇಕ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವಕೀಲರ ಹತ್ಯೆ, ಹಲ್ಲೆ, ನಿಂದನೆ  ಮಾಡಿರುವಂತಹ ಸನ್ನಿವೇಶಗಳು ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕೀಲರು ಅನೇಕ ಪ್ರಜೆಗಳ ಮಾನ, ಆಸ್ತಿ , ಜೀವಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿದ್ದು, ನಮ್ಮನ್ನು ರಕ್ಷಣೆ ಮಾಡಿ ಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಮಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ . ವಕೀಲರ ರಕ್ಷಣೆಗಾಗಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರುವುದು ತುಂಬಾ ಅತ್ಯವಶ್ಯಕ. ಆದ್ದರಿಂದ ಕೂಡಲೇ ಕರ್ನಾಟಕ ರಾಜ್ಯದ ವಕೀಲರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದು ವಕೀಲರ ಜೀವ, ಮಾನ, ಆಸ್ತಿಗಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜು, ನಿಕಟಪೂರ್ವ ಅಧ್ಯಕ್ಷ ಎನ್.ಟಿ. ಮಂಜುನಾಥ್, ಉಪಾಧ್ಯಕ್ಷ ಬಿ.ಬಿ. ರಾಮಪ್ಪ, ಕಾರ್ಯದರ್ಶಿ ಲೋಕಿಕೆರೆ ಹೆಚ್. ಪ್ರದೀಪ್, ಜಿ.ಕೆ. ಬಸವರಾಜು, ವಕೀಲರಾದ ಅನೀಸ್ ಪಾಷ, ಎಲ್.ಹೆಚ್. ಅರುಣ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: Content is protected !!