ಹರಿಹರ,ಜು.19- ಕೊರೊನಾ ಸಮಸ್ಯೆ ಇನ್ನೂ ಪರಿಹಾರವಾಗದೇ ಇರುವುದರಿಂದ ಕೊರೊನಾ ನಿಯಮ ಉಲ್ಲಂಘಿಸದಂತೆ ಮನೆಯಲ್ಲೇ ಸರಳವಾಗಿ ಬಕ್ರೀದ್ ಆಚರಿಸಿ ಎಂದು ಪೊಲೀಸ್ ವೃತ್ತಾಧಿಕಾರಿ ಸತೀಶ್ ಕುಮಾರ್ ಕರೆ ನೀಡಿದ್ದಾರೆ.
ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಇಂದು ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ರೋಗವು ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಪ್ರಾರ್ಥನೆ ಮಾಡಿ ಸರಳವಾಗಿ ಆಚರಣೆ ಮಾಡುವುದು ಒಳ್ಳೆಯದು. ಇದರಿಂದ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಪಿಎಸ್ಐ ಸುನಿಲ್ ಬಸವರಾಜ್ ತೇಲಿ ಮಾತನಾಡಿ, ಸರ್ಕಾರ ಲಾಕ್‍ಡೌನ್ ತೆರವು ಗೊಳಿಸಿದ್ದರೂ ಕೂಡ ವಾಣಿಜ್ಯ ಸೇರಿದಂತೆ, ಎಲ್ಲಾ ಬಗೆಯ ಚಟುವಟಿಕೆಗಳಿಗೂ ಷರತ್ತು ಬದ್ಧ ಅನುಮತಿಯನ್ನು ಮಾತ್ರ ನೀಡಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಕ್ರೀಡೆ ಸೇರಿದಂತೆ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ರಾಜ್ಯ ವಕ್ಫ್ ಬೋರ್ಡ್ ಕೊರೊನಾವನ್ನು ನಿಯಂತ್ರಿಸುವ ಉದ್ದೇಶದಿಂದ ಹೊರಡಿಸಿರುವ ಮಾರ್ಗಸೂಚಿಯನ್ವಯ ನಾಡಿದ್ದು ದಿನಾಂಕ 21 ರ ಬಕ್ರೀದ್ ಹಬ್ಬದ ದಿನದಂದು ಯಾವುದೇ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಎಲ್ಲಾ ವರ್ಗದವರೂ ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿದವರನ್ನು ಪಾರು ಮಾಡುವಲ್ಲಿ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.