5 ಲಕ್ಷ ರೂ. ಲಂಚ : ಎಸಿಬಿ ಬಲೆಗೆ ಪಿಡಿಓ

ಹೊನ್ನಾಳಿ, ಏ.26- ಜಮೀನು ಖಾತೆ ಬದಲಿಸಲು 5 ಲಕ್ಷ ರೂ. ಲಂಚ   ಪಡೆಯುತ್ತಿದ್ದ  ಪಿಡಿಒ ಹಾಗೂ ಸ್ವಚ್ಛತಾ ಸಿಬ್ಬಂದಿ ಸೋಮವಾರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ತಾಲ್ಲೂಕಿನ ಹಿರೇಗೋಣಿಗೆರೆ ಮತ್ತು ಎಚ್. ಕಡದಕಟ್ಟೆ ಗ್ರಾಪಂ ಪಿಡಿಒ ಕೆ. ಅರುಣ್ ಹಾಗೂ ಎಚ್. ಕಡದಕಟ್ಟೆ ಗ್ರಾಪಂ ಸ್ವಚ್ಛತಾ ಸಿಬ್ಬಂದಿ ಚನ್ನಪ್ಪ ಬಂಧಿತ ಆರೋಪಿಗಳು.

ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹಿರೇಮಠ ಗ್ರಾಮದ ಸರ್ವೇ ನಂ. 59/2ರ ಒಂದೂವರೆ ಎಕರೆ ಜಮೀನನ್ನು ತಮ್ಮ ತಂದೆಯ ಹೆಸರಿನಿಂದ ತಾಯಿಯ ಹೆಸರಿಗೆ ವರ್ಗಾಯಿಸಿ ಖಾತೆ ಮಾಡಿಕೊಡುವಂತೆ ಕಿರಣ್‍ಕುಮಾರ್ ಅರ್ಜಿ ಸಲ್ಲಿಸಿದ್ದರು. 

ಖಾತೆ ಮಾಡಿಕೊಡಲು ಕಿರಣ್‍ಕುಮಾರ್ ಪಿಡಿಒ ಅರುಣ್‍ಗೆ 2021ರ ಮಾರ್ಚ್ 5ರಂದು ಮುಂಗಡವಾಗಿ 2 ಲಕ್ಷ ರೂ.ಗಳನ್ನು ನೀಡಿದ್ದರು. ಆದರೆ, ಖಾತೆ ಮಾಡಿಕೊಡಲು ಸತಾಯಿಸುತ್ತಿದ್ದ ಪಿಡಿಒ ಕೆ. ಅರುಣ್, ತಮಗೆ ಆ ಜಮೀನಿನಲ್ಲಿ 11 ಸೈಟುಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದಕ್ಕೊಪ್ಪದ ಕಿರಣ್‍ಕುಮಾರ್ 8 ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದರು.

ಹಣದ ಮೊದಲ ಕಂತಾಗಿ 5 ಲಕ್ಷ ರೂ.ಗಳನ್ನು ಸೋಮವಾರ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆಯ ಗಂಗಾ ಸಾಮಿಲ್ ಬಳಿ ನೀಡುವುದಾಗಿ ಕಿರಣ್‍ಕುಮಾರ್ ತಿಳಿಸಿದ್ದರು. ಆದರೆ, ಪಿಡಿಒ ಕೆ. ಅರುಣ್ ಲಂಚದ ಹಣ ಪಡೆದುಕೊಳ್ಳಲು ಸ್ವಚ್ಛತಾ ಸಿಬ್ಬಂದಿ ಚನ್ನಪ್ಪಗೆ ಸೂಚಿಸಿದ್ದರು. ಕಿರಣ್‍ಕುಮಾರ್ 5 ಲಕ್ಷ ರೂ.ಗಳನ್ನು ಚನ್ನಪ್ಪಗೆ ನೀಡುವಾಗ ತಮ್ಮ ಸಿಬ್ಬಂದಿಯೊಂದಿಗೆ ಎಸಿಬಿ ಡಿವೈಎಸ್ಪಿ ಎಂ. ಪ್ರವೀಣ್ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಡಿಒ ಕೆ. ಅರುಣ್ ಹಾಗೂ ಸ್ವಚ್ಛತಾ ಸಿಬ್ಬಂದಿ ಚನ್ನಪ್ಪ ಇಬ್ಬರಿಗೂ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಲಾಯಿತು. ಬಳಿಕ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. 

ದಾಳಿ ವೇಳೆ ಎಸಿಬಿ ಇನ್ಸ್‍ಪೆಕ್ಟರ್ ಸಿ. ಮಧುಸೂದನ್, ಸಿಬ್ಬಂದಿ ಎನ್.ಪಿ. ಮೋಹನ್, ಧನರಾಜ್, ಕಲ್ಲೇಶ್, ವೀರೇಶ್, ಆಂಜನೇಯ, ಬಸವರಾಜು, ವಿನಾಯಕ, ನಾಗರಾಜು ಉಪಸ್ಥಿತರಿದ್ದರು.

ಇಬ್ಬರನ್ನು ಕೊರೊನಾ ಪರೀಕ್ಷೆಯ ನಂತರ ಸೊಮವಾರ ಸಂಜೆ 6 ಗಂಟೆಗೆ ಹೆಚ್ಚಿನ ವಿಚಾರಣೆಗಾಗಿ ಕಡದಕಟ್ಟೆ ಪಂಚಾಯಿತಿಗೆ ಕರೆತರಲಾಯಿತು.
ಇಓ ಗಂಗಾಧರ ಮೂರ್ತಿ ಉಪಸ್ಥಿತರಿದ್ದರು.

error: Content is protected !!