ನಾಳೆ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕರ ಬೆಂಗಳೂರು ಚಲೋ

ದಾವಣಗೆರೆ, ಫೆ.28- ಪಿಂಚಣಿ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ ನಾಡಿದ್ದು ದಿನಾಂಕ 2 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಫೆಡರೇಷನ್‌ ರಾಜ್ಯಾಧ್ಯಕ್ಷ ಹೆಚ್‌.ಕೆ. ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಹೊರಟು ಫ್ರೀಡಮ್‌ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಸಿದ ನಂತರ ಸಂಬಂಧಿಸಿದ ಇಲಾಖೆ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ನಾಲ್ಕು ದಶಕಗಳಿಂದ ಕನಿಷ್ಟ ವೇತನವೂ ಇಲ್ಲದೆ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸೇವಾ ಹಿರಿತನದ ಆಧಾರದ ಮೇಲೆ ಗೌರವ ಧನ ನೀಡಬೇಕು. ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಉಚಿತ ವೈದ್ಯಕೀಯ ಸೌಲಭ್ಯ, ಇಎಸ್‌ಐ, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ತರಬೇತಿ ನೀಡಬೇಕೆಂದರು.

ಮಾ. 1 ರಂದು ಊಟದ ವ್ಯವಸ್ಥೆಯೊಂದಿಗೆ ಬೆಂಗಳೂರು ಚಲೋ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದರು.

ಆವರಗೆರೆ ಪಿ.ಬಿ. ಚಂದ್ರು, ಎಂ.ಬಿ. ಶಾರದಮ್ಮ, ಎಸ್‌.ಎಸ್‌. ಮಲ್ಲಮ್ಮ, ಸಿ.ಬಿ. ಕಾಳಮ್ಮ, ಎಂ. ಜಯಮ್ಮ, ವಿಜಯಕುಮಾರಿ, ರೇಣುಕಮ್ಮ, ಸರೋಜಮ್ಮ, ಸುರೇಶ್‌, ಸುಧಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!